ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ ಹಳೆ 500 ಹಾಗೂ 1000 ರುಪಾಯಿ ನೋಟುಗಳನ್ನು ನಿಷೇಧಿಸಿ ಹೊಸ 500 ಹಾಗೂ 2000 ರುಪಾಯಿ ನೋಟುಗಳನ್ನು ಬಿಡುಗಡೆ ಮಾಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಇದೀಗ ಹೊಸ 1 ರುಪಾಯಿ ನೋಟುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಹಳೆಯ 1 ರುಪಾಯಿ ನೋಟಿಗಿಂತ ಇದು ಅತ್ಯಂತ ಭಿನ್ನವಾಗಿರಲಿದೆ. ಬಣ್ಣ ಮತ್ತು ವಿನ್ಯಾಸದಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗುತ್ತದೆ. ಹೊಸ 1 ರೂಪಾಯಿಯ ನೋಟಿನ ಮೇಲೆ ಸಾಗರ್ ಸಾಮ್ರಾಟ್ ತೈಲ ಪರಿಶೋಧನಾ ಘಟಕದ ಚಿತ್ರವನ್ನು ಮುದ್ರಿಸಲಾಗುವುದು ಎಂದು ಆರ್ ಬಿಐ ತಿಳಿಸಿದೆ.
ಹೊಸ ಒಂದು ರುಪಾಯಿ ನೋಟು ಗುಲಾಬಿ ಮತ್ತು ಹಸಿರು ಬಣ್ಣಗಳ ಕಾಂಬಿನೇಷನ್ ಹೊಂದಿರಲಿದೆ. 1 ಎಂಬ ಅಂಕಿಯನ್ನು 15 ಭಾಷೆಗಳಲ್ಲಿ ನೋಟಿನ ಮೇಲೆ ಮುದ್ರಿಸಲಾಗವುದು ಎಂದು ಆರ್ ಬಿಐ ಹೇಳಿದೆ.
ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧದ ಘೋಷಣೆ ಮಾಡಿದ್ದರು. ನಂತರ ಸರ್ಕಾರ ಜಾಗತಿಕ ಸ್ಟ್ಯಾಂಡರ್ಡ್ ಹಾಗೂ ವಿಶಿಷ್ಟ ಸೆಕ್ಯೂರಿಟಿ ಫೀಚರ್ ಹೊಂದಿರುವ 500 ಮತ್ತು 2000 ರುಪಾಯಿ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿತ್ತು.