ನವದೆಹಲಿ: ಬ್ಯಾಂಕಿನ ಚೆಕ್ ಪುಸ್ತಕ ಸೌಲಭ್ಯವನ್ನು ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾವನೆ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಸದ್ಯದಲ್ಲಿಯೇ ಬ್ಯಾಂಕುಗಳ ಚೆಕ್ ಪುಸ್ತಕ ಸೌಲಭ್ಯವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ.
ಈ ವರದಿಯನ್ನು ಹಣಕಾಸು ಸಚಿವಾಲಯ ಟ್ವೀಟ್ ಮೂಲಕ ತಳ್ಳಿಹಾಕಿದೆ. ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸೌಲಭ್ಯವಾದ ಚೆಕ್ ಪುಸ್ತಕವನ್ನು ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾವನೆ ಹಣಕಾಸು ಇಲಾಖೆಯ ಪರಿಗಣನೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಬಹು ಉಪಕ್ರಮಗಳ ಮೂಲಕ ಜನರು ನಗದು ವಹಿವಾಟುಗಳನ್ನು ಕಡಿಮೆ ಮಾಡಿ ಡಿಜಿಟಲ್ ಮತ್ತು ವಿದ್ಯುನ್ಮಾನ ವಹಿವಾಟುಗಳನ್ನು ಹೆಚ್ಚೆಚ್ಚು ಬಳಸಲು ಸರ್ಕಾರ ಒತ್ತು ನೀಡುತ್ತಿದೆ.
ಆದರೆ ದೇಶದಲ್ಲಿ ಹಣ ಪಾವತಿ ವ್ಯವಸ್ಥೆಯಲ್ಲಿ ಚೆಕ್ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತದೆ. ಇದು ವ್ಯಾಪಾರ, ವಹಿವಾಟುಗಳ ಬೆನ್ನೆಲುಬಾಗಿದ್ದು ವಹಿವಾಟಿನ ಸುರಕ್ಷತೆ ದೃಷ್ಟಿಯಿಂದ ಚೆಕ್ ಪುಸ್ತಕಗಳು ಮುಖ್ಯವಾಗಿವೆ ಎಂದು ಹಣಕಾಸು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.