ಯುದ್ಧ ವಿಮಾನ ತಯಾರಿಸಲು ಸಾಬ್‌ ಜತೆ ಕೈಜೋಡಿಸಿದ ಅದಾನಿ ಗ್ರೂಪ್

ಅದಾನಿ ಗ್ರೂಪ್ ಸಹಯೋಗದೊಂದಿಗೆ ಭಾರತೀಯ ವಾಯುಪಡೆ(ಐಎಎಫ್)ಗಾಗಿ ಭಾರತದಲ್ಲಿ ಒಂದೇ ಎಂಜಿನ್‌ನ ಲಘು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅದಾನಿ ಗ್ರೂಪ್ ಸಹಯೋಗದೊಂದಿಗೆ ಭಾರತೀಯ ವಾಯುಪಡೆ(ಐಎಎಫ್)ಗಾಗಿ ಭಾರತದಲ್ಲಿ ಒಂದೇ ಎಂಜಿನ್‌ನ ಲಘು ಬಹುಪಯೋಗಿ ಗ್ರೈಪೆನ್‌ ಯುದ್ಧ ವಿಮಾನಗಳನ್ನು ತಯಾರಿಸುವುದಾಗಿ ಶುಕ್ರವಾರ ಸ್ವೀಡನ್‌ನ ಪ್ರಮುಖ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಸಾಬ್‌ ಘೋಷಿಸಿದೆ.
ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಮತ್ತು ಸಾಭ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಕನ್‌ ಬಸ್ಖೆ ಅವರು ಈ ಹೊಸ ಸಹಭಾಗಿತ್ವವನ್ನು ಘೋಷಿಸಿದ್ದಾರೆ.
ಭಾರತದಲ್ಲಿ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು ನಮ್ಮ ಈ ಜಂಟಿ ಯೋಜನೆಯ ಉದ್ದೇಶವಾಗಿದ್ದು, ಇಂಧನ ವಲಯದಲ್ಲಿ ಉನ್ನತ ತಂತ್ರಜ್ಞಾನದ ಯೋಜನೆಗಳನ್ನು ಕೈಗೊಳ್ಳುವ ರೀತಿಯಲ್ಲಿ ಹೊಸ ಯುದ್ಧ ವಿಮಾನಗಳನ್ನು ನಿರ್ಮಿಸುವುದಾಗಿ ಬಸ್ಖೆ ಅವರು ಹೇಳಿದ್ದಾರೆ.
ಅದಾನಿ ಸಮೂಹವನ್ನು ರಕ್ಷಣಾ ಸಚಿವಾಲಯವು ಆಯ್ಕೆ ಮಾಡದೇ ಹೋದರೆ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಬಸ್ಖೆ ಅವರು, ರಕ್ಷಣಾ ಯೋಜನೆಗೆ ಅದಾನಿ ಸಮೂಹವು ಉತ್ತಮ ಪಾಲುದಾರ ಎಂದು ನಾವು ನಂಬಿದ್ದೇವೆ. ಅದಾನಿ ಸಮೂಹ ಆಯ್ಕೆಯಾಗದು ಎಂಬ ಅನುಮಾನ ಇದ್ದಿದ್ದರೆ ನಾವು ಮುಂದಡಿ ಇಡುತ್ತಲೇ ಇರಲಿಲ್ಲ ಎಂದು ತಿಳಿಸಿದ್ದಾರೆ.
ಅದಾನಿ ಸಮೂಹಕ್ಕೆ ರಕ್ಷಣೆ ಮತ್ತು ವಿಮಾನ ತಯಾರಿಕೆ ಕ್ಷೇತ್ರದಲ್ಲಿ ಯಾವುದೇ ಅನುಭವ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸ್ಥೆಯ ಹಿರಿಯ ಅಧಿಕಾರಿ ಅಶೀಸ್‌ ರಾಜವಂಶಿ, ಬಂದರು ಮತ್ತು ವಿದ್ಯುತ್‌ ಕ್ಷೇತ್ರಕ್ಕೆ ಪ್ರವೇಶಿಸಿದಾಗಲೂ  ಆ ಕ್ಷೇತ್ರದಲ್ಲಿ ನಮಗೆ ಯಾವುದೇ ಅನುಭವ ಇರಲಿಲ್ಲ ಎಂದು ಹೇಳಿದ್ದಾರೆ.
ಮಿಗ್‌ 21 ಮತ್ತು ಮಿಗ್‌ 27 ಯುದ್ಧ ವಿಮಾನಗಳನ್ನು ಸೇವೆಯಿಂದ ಹಿಂದಕ್ಕೆ ಪಡೆಯಲಾಗುತ್ತಿದೆ. ಹಾಗಾಗಿ ವಾಯುಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುದ್ಧ ವಿಮಾನಗಳ ಅಗತ್ಯ ಇದೆ. ಆದ್ದರಿಂದ ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಿ ಪೂರೈಸುವ ಸಂಸ್ಥೆಗಳಿಂದ ಪ್ರಸ್ತಾವಗಳನ್ನು ಎದುರುನೋಡುತ್ತಿದೆ. ಭಾರತದ ಸಂಸ್ಥೆಗಳನ್ನು ಪಾಲುದಾರರಾಗಿ ಹೊಂದಿರಬೇಕು ಎಂಬುದು ಈ ಯೋಜನೆಯ ಒಂದು ಷರತ್ತಾಗಿದೆ.
ವಾಯುಪ‍ಡೆಗೆ ನೂರು ಏಕ ಎಂಜಿನ್‌ ಯುದ್ಧ ವಿಮಾನಗಳನ್ನು ಖರೀದಿಸುವ ನಿರ್ಧಾರವನ್ನು ಇತ್ತೀಚೆಗೆ ರಕ್ಷಣಾ ಸಚಿವಾಲಯ ಪ್ರಕಟಿಸಿತ್ತು. ಈ ನಿರ್ಧಾರದ ಬಳಿಕ ರೂಪುಗೊಂಡ ಎರಡನೇ ದೊಡ್ಡ ಸಹಭಾಗಿ ಯೋಜನೆ ಇದಾಗಿದೆ. ಇದಕ್ಕೂ ಮೊದಲು ಟಾಟಾ ಸಮೂಹ ಮತ್ತು ಅಮೆರಿಕದ ಲಾಕ್‌ಹೀಡ್‌ ಮಾರ್ಟಿನ್‌ ಸಂಸ್ಥೆಗಳು ಎಫ್‌–16 ವಿಮಾನಗಳನ್ನು ಭಾರತದಲ್ಲಿ ತಯಾರಿಸುವುದಕ್ಕಾಗಿ ಸಹಭಾಗಿತ್ವ ಮಾಡಿಕೊಂಡಿವೆ. ಈ ಸಹಭಾಗಿತ್ವದಲ್ಲಿ ಎಫ್‌–16 ವಿಮಾನಗಳು ಭಾರತದಲ್ಲಿಯೇ ತಯಾರಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com