ಹಣಕಾಸು ವಂಚನೆ ಎಸಗಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಮಸೂದೆ: ಕೇಂದ್ರ ಸಂಪುಟ ಒಪ್ಪಿಗೆ

ಭಾರೀ ಮೊತ್ತದ ಹಣಕಾಸು ವಂಚನೆ ಎಸಗಿದವರು ದೇಶಬಿಟ್ಟು ಹೋಗದಂತೆ ತಡೆಯಲು ಮತ್ತು ಅವರ ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ; ಭಾರೀ ಮೊತ್ತದ ಹಣಕಾಸು ವಂಚನೆ ಎಸಗಿದವರು ದೇಶಬಿಟ್ಟು ಹೋಗದಂತೆ ತಡೆಯಲು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಕೇಂದ್ರ ಸಂಪುಟ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಮಸೂದೆ 2017ಕ್ಕೆ ಅನುಮೋದನೆ ನೀಡಿದೆ.

ಮಸೂದೆ ಕಾನೂನಾಗಿ ಜಾರಿಗೆ ಬಂದರೆ ಹಣಕಾಸಿನ ಅಪರಾಧವೆಸಗಿ ತಪ್ಪಿಸಿಕೊಂಡು ಹೋದವರ ಆಸ್ತಿಗಳನ್ನು ಅಡವಿಡಲು ಸಹಾಯ ಮಾಡುತ್ತದೆ. ಅಲ್ಲದೆ ಬ್ಯಾಂಕಿಂಗ್ ವಲಯದಲ್ಲಿ ಲೆಕ್ಕಪರಿಶೋಧನೆಯನ್ನು ತಪಾಸಣೆ ಮಾಡಲು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರವನ್ನು ಸ್ಥಾಪಿಸುವಂತೆ ಕೂಡ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇತ್ತೀಚೆಗೆ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12,700 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅವರು ವಿದೇಶಕ್ಕೆ ತಪ್ಪಿಸಿಕೊಂಡು ಹೋಗಿದ್ದಾರೆ ಎಂಬ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಮಸೂದೆ ಮಹತ್ವವಾಗಿದೆ.

ಭಾರತೀಯ ಕೋರ್ಟ್ ನ ಹೊರಗೆ ಹೋಗಿ ದೇಶದ ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಂಡವರನ್ನು ಪತ್ತೆಹಚ್ಚಿ  ಅವರ ವಿರುದ್ಧ ಕ್ರಮ ಕೈಗೊಳ್ಳಲು ಈ ಮಸೂದೆ ಸಹಾಯವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 100ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆಸಿ ವಂಚನೆ ಎಸಗಿದವರನ್ನು ಪತ್ತೆಹಚ್ಚಲು ಮಸೂದೆ ಸಹಾಯವಾಗಲಿದೆ. ಇದು ಸಂಸತ್ತಿನಲ್ಲಿ ಇದೇ ತಿಂಗಳ 5ರಂದು ಮಂಡನೆಯಾಗುವ ನಿರೀಕ್ಷೆಯಿದೆ.

ದೇಶಭ್ರಷ್ಟ ಆರ್ಥಿಕ ಅಪರಾಧಗಳ ಮಸೂದೆ 2018, ಬೇನಾಮಿ ಆಸ್ತಿಗಳು ಸೇರಿದಂತೆ ಆರ್ಥಿಕ ಅಪರಾಧಗಳನ್ನೆಸಗಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಸಹಾಯವಾಗಲಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಬ್ಯಾಂಕಿಂಗ್ ವಲಯದಲ್ಲಿ ಲೆಕ್ಕಪರಿಶೋಧನೆಯಲ್ಲಿ ಆಗಿರುವ ಅನೇಕ ಲೋಪದೋಷಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರವನ್ನು ಸ್ಥಾಪಿಸಲು ಕೂಡ ಸಂಪುಟ ಅನುಮೋದನೆ ನೀಡಿದೆ. ಪ್ರಾಧಿಕಾರದಲ್ಲಿ ಅಧ್ಯಕ್ಷ, ಮೂವರು ಪೂರ್ಣಾವಧಿಯ ಸದಸ್ಯರು ಮತ್ತು ಕಾರ್ಯದರ್ಶಿಗಳ ಹುದ್ದೆಯಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com