ನವದೆಹಲಿ: ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೋಚಾರ್, ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ಮನೆ, ಕಛೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ವಿಡಿಯೋಕಾನ್ ಸಂಸ್ಥೆಗೆ ನಿಯಮಬಾಹಿರ ಸಾಲ ನೀಡಿದ ಪ್ರಕರಣದಲ್ಲಿ ಇಡಿ ಚಂದಾ ಕೋಚಾರ್ ಅವರ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ಕೈಗೊಂಡಿದೆ. ಮುಂಬೈನ ನಿವಾಸ, ಕನಿಷ್ಟ ಐದು ಕಛೇರಿಗಳು ಸೇರಿ ವಿವಿಧೆಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಐಸಿಐಸಿಐ ಬ್ಯಾಂಕಿನಿಂದ 1,875 ಕೋಟಿ ರೂ. ಸಾಲ ಮಂಜೂರು ಮಾಡುವಲಿ ನಡೆದಿರುವ ಅಕ್ರಮ, ಭ್ರಷ್ಟಾಚಾರಗಳ ತನಿಖೆ ನಡೆಸುವ ಹಿನ್ನೆಲೆಯಲಿ ಚಂದಾ ಕೋಚಾರ್, ಪತಿ ದೀಪಕ್ ಕೋಚಾರ್ ಹಾಗೂ ವಿಡಿಯೋಕಾನ್ ಮುಖ್ಯಸ್ಥ ಧೂತ್ ಮತ್ತಿತರರ ವಿರುದ್ಧ ಸಿಬಿಐ ಫೆಬ್ರವರಿ ತಿಂಗಳ ಪ್ರಾರಂಭದಲ್ಲಿ ಪ್ರಕರಣ ದಾಖಲಿಸಿದೆ.
ಪೊಲೀಸ್ ಸಹಾಯದಿಂದ ಇಡಿ ಅಧಿಕಾರಿಗಳ ತಂಡವು ಹೆಚ್ಚಿನ ಸಾಕ್ಷ್ಯಗಳನ್ನು ಹುಡುಕುತ್ತಿದೆ ಮತ್ತು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂದಾ ಕೋಚಾರ್ ಐಸಿಐಸಿಐ ಬ್ಯಾಂಕ್ ಅಧ್ಯಕ್ಷೆಯಾಗಿದ್ದ ವೇಳೆ ಅವ್ಯವಹಾರ ನಡೆದಿದೆ ಎಂದು ಕಳೆದ ವರ್ಷ ಮಾರ್ಚ್ ನಲ್ಲಿ ಮೊದಲಿಗೆ ಆರೋಪ ಕೇಳಿಬಂದಿತ್ತು.ಇದೇ ಕಾರಣದಿಂದ ಅವರು ಕಳೆದ ಅಕ್ಟೋಬರ್ ನಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು.