
ರಿಯಾದ್: ಸೌದಿ ಅರೇಬಿಯಾದ ಎರಡು ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದ ಹಿನ್ನಲೆಯಲ್ಲಿ ತೈಲ ಉತ್ಪಾದನೆ ಸ್ಥಗಿತವಾಗಿದ್ದು ಸೋಮವಾರ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಏರಿಕೆಯಾಗಿದೆ.
ವಿಶ್ವದ ತೈಲ ಉತ್ಪಾದನೆಯ ಪ್ರಮುಖ ಘಟಕಗಳು ಈ ಕೇಂದ್ರಗಳಾಗಿರುವುದರಿಂದ ಸದ್ಯಕ್ಕೆ ತೈಲ ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ತೈಲ ಬೆಲೆ ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಡ್ರೋನ್ ದಾಳಿಗೆ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಆರೋಪ ಹೊರಿಸುತ್ತಿದ್ದು ಆ ದೇಶದ ಮೇಲೆ ಮಿಲಿಟರಿ ದಾಳಿ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇಂದು ಬೆಳಗಿನ ವಹಿವಾಟು ಆರಂಭಕ್ಕೆ ತೈಲ ಬೆಲೆಯಲ್ಲಿ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್ ಶೇಕಡಾ 10.68ರಷ್ಟು ಏರಿಕೆಯಾಗಿ ಡಾಲರ್ 60.71, ಬ್ರೆಂಟ್ ಶೇಕಡಾ 11.77ರಷ್ಟು ಏರಿಕೆಯಾಗಿ ಡಾಲರ್ 67.31ರಷ್ಟಾಗಿದೆ.
ಯೆಮನ್ ಸಮೀಪವಿರುವ ತೈಲ ಘಟಕಗಳ ಮೇಲೆ ಟೆಹ್ರಾನ್ ಮೂಲದ ಹೌತಿ ಬಂಡುಕೋರರು ದಾಳಿ ನಡೆಸಿದ್ದರಿಂದ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ಶೇಕಡಾ 6ರಷ್ಟು ಇಲ್ಲಿಂದ ರಫ್ತು ಆಗುವುದು ಕಡಿಮೆಯಾಗಿದೆ.
Advertisement