ನವದೆಹಲಿ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್)ವರದಿಯ ಪ್ರಕಾರ, ಮಾರ್ಚ್ 2020 ರಲ್ಲಿ ಭಾರ್ತಿ ಏರ್ಟೆಲ್ 1.2 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ ತನ್ನ ಚಂದಾದಾರರಲ್ಲಿ ಅತಿದೊಡ್ಡ ಕುಸಿತವನ್ನು ದಾಖಲಿಸಿದೆ ವೊಡಾಫೋನ್ ಐಡಿಯಾ ಈ ಸಮಯದಲ್ಲಿ 63 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಈ ಎರಡೂ ಟೆಲಿಕಾಂ ಸಂಸ್ಥೆಗಳು ಒಟ್ಟಾಗಿ 75 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.
ಇದೇ ವೇಳೆ ಈ ಎರಡೂ ಸಂಸ್ಥೆಗಳ ಪ್ರತಿಸ್ಪರ್ಧಿ ಸಂಸ್ಥೆ ರಿಲಯನ್ಸ್ ಜಿಯೋ 46 ಲಕ್ಷ ಚಂದಾದಾರರ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ಅಂಕಿಅಂಶಗಳ ಪ್ರಕಾರ, ಜಿಯೋ ಮಾರುಕಟ್ಟೆಯಲ್ಲಿ ಶೇಕಡಾ 33.47 ಮುನ್ನಡೆ ಸಾಧಿಸಿದೆ ಮತ್ತು ಚಂದಾದಾರರ ಸಂಖ್ಯೆಯಲ್ಲಿ ಏರ್‌ಟೆಲ್ ಶೇ 28.31 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮೂರನೆಯದಾಗಿ, ವೊಡಾಫೋನ್ ಐಡಿಯಾವು 27.57 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ, ನಂತರದ ಸ್ಥಾನದಲ್ಲಿ ಬಿಎಸ್ಎನ್ಎಲ್ (ಶೇಕಡಾ 10.35) ಮತ್ತು ಎಂಟಿಎನ್ಎಲ್ (ಶೇ 0.29) ಇದೆ.
ಫೆಬ್ರವರಿಯಲ್ಲಿ 9 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಗಳಿಸಿದ್ದ ಏರ್‌ಟೆಲ್‌ಗೆ ಇದು ದೊಡ್ಡ ಆಘಾತವಾಗಿದೆ. ವೊಡಾಫೋನ್ ಐಡಿಯಾ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಲೇ ಸಾಗಿದೆ. ಈ ಮೊದಲು ಫೆಬ್ರವರಿಯಲ್ಲಿ ಇದು 34 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಕಳೆದುಕೊಂಡಿತ್ತು. ಮಾರ್ಚ್ ನಲ್ಲಿ ರಿಲಯನ್ಸ್ ಜಿಯೋ ಚಂದಾದಾರರ ಸಂಖ್ಯೆ38.7 ಕೋಟಿಗೂ ಅಧಿಕವಾಗಿತ್ತು. ಭಾರ್ತಿ ಏರ್‌ಟೆಲ್‌ನ ಚಂದಾದಾರರ ಸಂಖ್ಯೆ 32.7 ಕೋಟಿವೊಡಾಫೋನ್ ಐಡಿಯಾ (31.9 ಕೋಟಿ), ಬಿಎಸ್‌ಎನ್‌ಎಲ್ (11.9 ಕೋಟಿ), ಮತ್ತು ಎಂಟಿಎನ್‌ಎಲ್ (33.6 ಲಕ್ಷ).
ಮಾರ್ಚ್ 2020 ಟ್ರಾಯ್ ವರದಿಯು ಒಟ್ಟು ಮೊಬೈಲ್ ಚಂದಾದಾರರು ಫೆಬ್ರವರಿ ಅಂತ್ಯದಲ್ಲಿ 116 ಕೋಟಿಯಿಂದ ಮಾರ್ಚ್ ಅಂತ್ಯದ ವೇಳೆಗೆ 115 ಕೋಟಿಗೆ ಇಳಿದಿದೆ ಎಂದು ಬಹಿರಂಗಪಡಿಸಿದೆ.
ಬ್ರಾಡ್‌ಬ್ಯಾಂಡ್ ಚಂದಾದಾರರು
ರಿಲಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯನ್ನು ನಿಯಂತ್ರಿಸುವುದರ ಜೊತೆಗೆ ಶೇ 56.50 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ವೇಳೆ ಏರ್‌ಟೆಲ್ ಶೇ 21.61 ರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವೊಡಾಫೋನ್ ಶೇ 17.09 ಮಾರುಕಟ್ಟೆ ಪಾಲು ಹೊಂದಿದೆ.
Advertisement