ಸಾಲದ ಇಎಂಐ ಪಾವತಿ ವಿಸ್ತರಣೆಗೆ ಶಿಫಾರಸು: ಗ್ರಾಹಕರಲ್ಲಿ ಮೂಡಿರುವ ಸಂದೇಹಗಳೇನು, ಆರ್ ಬಿಐ ಸ್ಪಷ್ಟನೆಯೇನು?

ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿರುವುದು ಖಾಸಗಿ, ಸರ್ಕಾರಿ ವಲಯಗಳು ಸೇರಿದಂತೆ ಎಲ್ಲಾ ಉದ್ದಿಮೆಗಳು, ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.
ಸಾಲದ ಇಎಂಐ ಪಾವತಿ ವಿಸ್ತರಣೆಗೆ ಶಿಫಾರಸು: ಗ್ರಾಹಕರಲ್ಲಿ ಮೂಡಿರುವ ಸಂದೇಹಗಳೇನು, ಆರ್ ಬಿಐ ಸ್ಪಷ್ಟನೆಯೇನು?
Updated on

ನವದೆಹಲಿ:ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿರುವುದು ಖಾಸಗಿ, ಸರ್ಕಾರಿ ವಲಯಗಳು ಸೇರಿದಂತೆ ಎಲ್ಲಾ ಉದ್ದಿಮೆಗಳು,ವಾಣಿಜ್ಯ, ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.

ಈ ಸಂದರ್ಭದಲ್ಲಿ ಜನರು ಎಲ್ಲಾ ಹಣಕಾಸು ಸಂಸ್ಥೆಗಳಿಂದ, ಬ್ಯಾಂಕುಗಳಿಂದ ಪಡೆದಿರುವ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಶಿಕ್ಷಣ  ಅವಧಿ ಸಾಲಗಳ(term loan) ಆರಂಭಿಕ ಮಾಸಿಕ ಕಂತು(ಇಎಂಐ)ಪಾವತಿಗೆ ಮೂರು ತಿಂಗಳ ವಿನಾಯ್ತಿ ನೀಡಬಹುದು ಎಂದು ಬ್ಯಾಂಕುಗಳಿಗೆ ಆರ್ ಬಿಐ ಸಲಹೆ ನೀಡಿದೆ.

ಈ ಸಂದರ್ಭದಲ್ಲಿ ಗ್ರಾಹಕರಿಗೆ ಹತ್ತು ಹಲವು ಪ್ರಶ್ನೆಗಳು, ಸಂದೇಹಗಳು ಉದ್ಭವಿಸಿದೆ. ಈ ಸಂದರ್ಭದಲ್ಲಿ ಜನರಲ್ಲಿ ಮೂಡುವ ಸಾಮಾನ್ಯ ಪ್ರಶ್ನೆಗಳು ಹೀಗಿವೆ.

ಮೂರು ತಿಂಗಳ ಇಎಂಐ ಮುಂದೂಡಿಕೆ ಎಂದರೇನು?

-ಹಣಕಾಸು ಭಾಷೆಯಲ್ಲಿ ಹೇಳುವುದಾದರೆ ಹಣಕಾಸು ಬಿಕ್ಕಟ್ಟು ಸಮಯದಲ್ಲಿ ಬಡ್ಡಿ ಅಥವಾ ಮೂಲಮೊತ್ತ ಅಥವಾ ಎರಡನ್ನೂ ಕೂಡ ಸಾಲಗಾರರು ಅಥವಾ ಸಾಲ ಪಡೆದವರು ಪಾವತಿಸದೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು. ಇಂತಹ ಹಣಕಾಸು ಬಿಕ್ಕಟ್ಟು ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಥವಾ ಕೇಂದ್ರೀಯ ಬ್ಯಾಂಕು ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿಶೇಷ ಅಧಿಕಾರ ಬಳಸಿಕೊಂಡು ಕೆಲ ಸಮಯಗಳವರೆಗೆ ಸಾಲ ಮರುಪಾವತಿ ಮಾಡದಂತೆ ಮಿತಿ ಹೇರುವುದು. ಹಣಕಾಸು ಬಿಕ್ಕಟ್ಟು ಮುಗಿದ ನಂತರ ಈ ತಾತ್ಕಾಲಿಕ ಪಾವತಿ ವಿನಾಯ್ತಿಯನ್ನು ತೆಗೆದುಹಾಕಬಹುದು. ತೀರಾ ಇತ್ತೀಚೆಗೆ ಯಸ್ ಬ್ಯಾಂಕಿಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಬ್ಯಾಂಕಲ್ಲಿ ಹಣ ಇಟ್ಟವರ ವಿತ್ ಡ್ರಾ ಮಿತಿಯನ್ನು ನಿರ್ಬಂಧಿಸಿದ್ದು ಮಾತ್ರವಲ್ಲದೆ ಹಣ ಸಾಲ ನೀಡುವುದಕ್ಕೂ ತಡೆಯನ್ನೊಡ್ಡಿತ್ತು.

ಹಾಗಾದರೆ ನಿನ್ನೆ ಪ್ರಕಟಗೊಂಡ ಆರ್ ಬಿಐಯ 3 ತಿಂಗಳ ಪಾವತಿ ವಿನಾಯ್ತಿಯಿಂದ ಏನಾಗುತ್ತದೆ?

-ಕೃಷಿಗೆ ಸಂಬಂಧಿಸಿದಂತೆ ಗ್ರಾಹಕರು ತೆಗೆದುಕೊಂಡ ಅವಧಿ ಸಾಲಗಳು, ರಿಟೈಲ್ ಸಾಲಗಳಾದ ಗೃಹ ಮತ್ತು ವಾಹನ ಸಾಲಗಳು, ಮೊಬೈಲ್, ಟೆಲಿವಿಷನ್ ಸೆಟ್, ಶಿಕ್ಷಣ ಸಾಲ, ಯಾವುದೇ ಬ್ಯಾಂಕುಗಳು ನೀಡಿದ ಬೆಳೆ ಸಾಲ, ಹಣಕಾಸು ಸಂಸ್ಥೆಗಳು, ಎನ್ ಬಿಎಫ್ ಸಿಗಳು, ಹೌಸಿಂಗ್ ಫೈನಾನ್ಸ್ ಕಂಪೆನಿಗಳು ನೀಡಿದ ಸಾಲಗಳಿಗೆ ಈ 3 ತಿಂಗಳ ವಿನಾಯ್ತಿ ಅನ್ವಯವಾಗುತ್ತದೆ. ಇದು ಮಾರ್ಚ್ 1ರಿಂದ ಮೇ 31ರವರೆಗೆ ಅನ್ವಯವಾಗುತ್ತದೆ.

ಸಾಲ ಕಟ್ಟದಿದ್ದರೆ ದಂಡ ಹಾಕುತ್ತಾರೆಯೇ?

-ಗ್ರಾಹಕರು ಯಾವುದೇ ಬ್ಯಾಂಕ್ ನಿಂದ ಈ ಮೇಲೆ ತಿಳಿಸಿದಂತೆ ತೆಗೆದುಕೊಂಡ ಸಾಲಗಳನ್ನು ಜೂನ್ 1ರವರೆಗೆ ಪಾವತಿಸದಿದ್ದರೆ ದಂಡ ಬೀಳುವುದಿಲ್ಲ. ಆದರೆ ಈ ಅವಧಿಯ ಇಎಂಐ ಮೇಲಿನ ಬಡ್ಡಿಮೊತ್ತವನ್ನು ಗ್ರಾಹಕರು ಪಾವತಿಸಬೇಕು.

ಇನ್ನು ಕೆಲವೇ ದಿನಗಳಲ್ಲಿ ನನ್ನ ಸಾಲದ ಇಎಂಐ ಪಾವತಿಸಬೇಕಾಗಿದೆ, ಆರ್ ಬಿಐ ಪ್ರಕಟಣೆಯಿಂದ ನನ್ನ ಖಾತೆಯಿಂದ ಈ ತಿಂಗಳು ಹಣ ಪಾವತಿ ಮಾಡಬೇಕಾಗುವುದಿಲ್ಲವೆ?

-ಗ್ರಾಹಕರು ಬ್ಯಾಂಕುಗಳಿಂದ ಪಡೆದ ಮಧ್ಯಂತರ ಸಾಲದ ಮರುಪಾವತಿ ಅವಧಿಯನ್ನು ಇನ್ನು ಮೂರು ತಿಂಗಳು ವಿಸ್ತರಿಸಬಹುದು ಎಂದು ಆರ್ ಬಿಐ ಹೇಳಿದೆ. ಎಲ್ಲಾ ಅರ್ಹ ಸಾಲಗಾರರಿಗೆ ಇಎಂಐ ವಿಸ್ತರಣೆಯ ಸೌಲಭ್ಯವನ್ನು ಮೂರು ತಿಂಗಳು ವಿಸ್ತರಿಸಲು ಸಂಬಂಧಪಟ್ಟ ಬ್ಯಾಂಕು, ಹಣಕಾಸು ಸಂಸ್ಥೆಗಳು ತಮ್ಮ ಮಂಡಳಿಯಿಂದ ಅನುಮೋದಿತ ನೀತಿಗಳನ್ನು ರೂಪಿಸಬಹುದು ಎಂದು ಆರ್ ಬಿಐ ಹೇಳಿದೆ. ಇದರರ್ಥ ವೈಯಕ್ತಿಕ ಬ್ಯಾಂಕುಗಳು ಗ್ರಾಹಕರಿಗೆ ಇಎಂಐ ಪಾವತಿಯನ್ನು ಮೂರು ತಿಂಗಳು ವಿಸ್ತರಣೆ ಮಾಡುವ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದು ಸಾಲ ಪಡೆದ ಪ್ರತಿಯೊಬ್ಬ ಗ್ರಾಹಕರನ್ನು ಒಳಗೊಳ್ಳುತ್ತದೆಯೇ ಅಥವಾ ತಮಗೆ ಮೂರು ತಿಂಗಳು ವಿನಾಯ್ತಿ ನೀಡಿ ಎಂದು ಬ್ಯಾಂಕುಗಳಲ್ಲಿ ಮನವಿ ಮಾಡಿಕೊಳ್ಳುವ ಗ್ರಾಹಕರನ್ನು ಮಾತ್ರ ಒಳಗೊಳ್ಳುತ್ತದೆಯೋ ಎಂದು ಬ್ಯಾಂಕುಗಳೇ ನಿರ್ಧಾರ ತೆಗೆದುಕೊಳ್ಳಬೇಕು.

ಆದರೆ ಎಸ್ ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ಅವರು ನಿನ್ನೆ ವಿಡಿಯೊ ಕಾನ್ಫರೆನ್ಸ್ ಮೂಲಕ ಅವಧಿ ಸಾಲಗಳ ಮೇಲಿನ ಮೂರು ತಿಂಗಳ ಪಾವತಿಯನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.

ಪಾವತಿ ಮಾಡಬೇಕಾಗಿಲ್ಲ ಎನ್ನುವುದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ?

-ನಿಮ್ಮ ಬ್ಯಾಂಕು ಇಎಂಐ ಪಾವತಿಗೆ ಮೂರು ತಿಂಗಳ ವಿನಾಯ್ತಿ ನೀಡಿದರೆ ಕ್ರೆಡಿಟ್ ಅಂಕಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಯಾವ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಇಎಂಐ ಪಾವತಿ ಮುಂದೂಡಿಕೆ ನೀಡಬಹುದು?

-ಎಲ್ಲಾ ವಾಣಿಜ್ಯ ಬ್ಯಾಂಕುಗಳು(ಸ್ಥಳೀಯ ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಸ್ಥಳೀಯ ಪ್ರದೇಶ ಬ್ಯಾಂಕುಗಳು), ಸಹಕಾರಿ ಬ್ಯಾಂಕುಗಳು, ಎಲ್ಲಾ ಭಾರತ ಹಣಕಾಸು ಸಂಸ್ಥೆಗಳು, ಹೌಸಿಂಗ್ ಫೈನಾನ್ಸ್ ಕಂಪೆನಿಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳು) ಈ ರೀತಿ ಗ್ರಾಹಕರಿಗೆ ಇಎಂಐ ಪಾವತಿ ವಿನಾಯ್ತಿ ನೀಡಬಹುದು.

ಇದು ಇಎಂಐಗಳ ಮನ್ನಾವೇ ಅಥವಾ ಇಎಂಐಗಳ ಮುಂದೂಡುವಿಕೆಯೇ?

-ಇದು ಸಾಲಮನ್ನಾ ಅಲ್ಲ, ಆದರೆ ಮುಂದೂಡಿಕೆ. ಮರುಪಾವತಿ ಅವಧಿ ಮತ್ತು ನಂತರದ ಎಲ್ಲಾ ಬಾಕಿ ದಿನಾಂಕಗಳನ್ನು ಮತ್ತು ಅಂತಹ ಸಾಲಗಳ ಹಿಡುವಳಿದಾರರನ್ನು 3 ತಿಂಗಳವರೆಗೆ ವರ್ಗಾಯಿಸಬಹುದು ಎಂದು ಆರ್‌ಬಿಐ ಶಿಫಾರಸು ಮಾಡಿದೆ.

ಇದರರ್ಥ ಜೂನ್‌ನಲ್ಲಿ ಎಲ್ಲಾ 3 ಇಎಂಐಗಳನ್ನು ಒಂದೇ ಸಮಯದಲ್ಲಿ ಪಾವತಿಸಬೇಕಾಗುತ್ತದೆಯೇ

-ಈ ಬಗ್ಗೆ ಆರ್ ಬಿಐ ಸ್ಪಷ್ಟನೆ ಕೊಟ್ಟಿಲ್ಲ.ಇನ್ನೂ ಸೂಕ್ತ ನಿರ್ಧಾರಕ್ಕೆ ಬಂದಿಲ್ಲ.

 ಇಎಂಐ ಸ್ಥಗಿತ ಮೂಲ ಮತ್ತು ಬಡ್ಡಿ ಮೊತ್ತ ಎರಡಕ್ಕೂ ಅನ್ವಯವಾಗುತ್ತದೆಯೇ?

-ಮೂರು ತಿಂಗಳ ಪಾವತಿ ಮತ್ತು ಬಡ್ಡಿ ಸೇರಿದಂತೆ ನಿಮ್ಮ ಸಂಪೂರ್ಣ ಇಎಂಐ ಪಾವತಿಯಿಂದ ನಿಮಗೆ ವಿನಾಯಿತಿ ನೀಡಲಾಗುತ್ತದೆ. ಮಾರ್ಚ್ 1, 2020 ರಂತೆ ಬಾಕಿ ಇರುವ ಎಲ್ಲಾ ಸಾಲಗಳಿಗೆ ಇದು ಅನ್ವಯವಾಗುತ್ತದೆ.

ಇಎಂಐ ವಿಸ್ತರಣೆ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಒಳಗೊಳ್ಳುತ್ತದೆಯೇ?
-ಕ್ರೆಡಿಟ್ ಕಾರ್ಡ್‌ಗಳನ್ನು ರಿವಾಲ್ವಿಂಗ್ ಕ್ರೆಡಿಟ್ ಮತ್ತು ಟರ್ಮ್ ಸಾಲಗಳೆಂದು ವ್ಯಾಖ್ಯಾನಿಸಲಾಗಿದ್ದರೂ, ಆರ್‌ಬಿಐನ ಮಾರ್ಗಸೂಚಿಗಳು ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಒಳಗೊಂಡಿವೆ ಎಂದು ಸ್ಪಷ್ಟಪಡಿಸಿದೆ.

ಇಎಂಐ ವಿಸ್ತರಣೆ ಕ್ರೆಡಿಟ್ ಕಾರ್ಡ್‌ಗಳಲ್ಲಿ ತೆಗೆದುಕೊಂಡ ಸಾಲಗಳನ್ನು ಒಳಗೊಳ್ಳುತ್ತದೆಯೇ?
 -ಆರ್‌ಬಿಐ ಮಾರ್ಗಸೂಚಿಗಳು ಇದನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ. ಆದರೆ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಒಳಗೊಂಡಿರುವುದರಿಂದ, ಕ್ರೆಡಿಟ್ ಕಾರ್ಡ್‌ನಲ್ಲಿ ತೆಗೆದುಕೊಂಡ ಸಾಲಗಳನ್ನು ಸಹ ಒಳಗೊಂಡಿರಬಹುದು.

 

ಕಾರ್ಖಾನೆ ಸ್ಥಾಪಿಸಲು ಯೋಜನಾ ಸಾಲವನ್ನು ತೆಗೆದುಕೊಂಡಿದ್ದೇನೆ. ನನ್ನ ಇಎಂಐ ಪಾವತಿಸಲು ಸಾಧ್ಯವಿಲ್ಲವೇ?

-ಆರ್‌ಬಿಐ ಮಾರ್ಗಸೂಚಿಗಳು ನಿರ್ದಿಷ್ಟವಾಗಿ ಚಿಲ್ಲರೆ ಸಾಲಗಳನ್ನು ಉಲ್ಲೇಖಿಸುತ್ತವೆ. ಆದ್ದರಿಂದ ವ್ಯಾಪಾರ ಸಾಲವು ಅರ್ಹತೆ ಪಡೆಯುವ ಸಾಧ್ಯತೆಯಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com