ಸರ್ಕಾರ ಮತ್ತೊಂದು ಪ್ರೋತ್ಸಾಹಕ ಪ್ಯಾಕೇಜ್ ಘೋಷಿಸಲೂಬಹುದು: ಹಣಕಾಸು ಇಲಾಖೆ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ

ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಕೇಂದ್ರ ಸರ್ಕಾರ ಮತ್ತೊಂದು ಪ್ರೋತ್ಸಾಹಕ ಪ್ಯಾಕೇಜ್ ನ್ನು ಜನತೆಗೆ ಘೋಷಿಸುವ ಸಾಧ್ಯತೆಯಿದೆ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಅಜಯ್ ಭೂಷಣ್
ಅಜಯ್ ಭೂಷಣ್
Updated on

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಕೇಂದ್ರ ಸರ್ಕಾರ ಮತ್ತೊಂದು ಪ್ರೋತ್ಸಾಹಕ ಪ್ಯಾಕೇಜ್ ನ್ನು ಜನತೆಗೆ ಘೋಷಿಸುವ ಸಾಧ್ಯತೆಯಿದೆ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

ಮಾರ್ಚ್ ತಿಂಗಳ ನಂತರ ಕೋವಿಡ್ ಬಂದ ಮೇಲೆ ಕೇಂದ್ರ ಸರ್ಕಾರ ಸರಣಿಯಾಗಿ ಹಲವು ಪ್ಯಾಕೇಜ್ ಗಳನ್ನು ನೀಡುತ್ತಾ ಬಂದಿದೆ. ಪ್ರತಿ ಘೋಷಣೆಯಲ್ಲಿಯೂ ಆರ್ಥಿಕವಾಗಿ ನಿರ್ಗತಿಕ ವರ್ಗಗಳನ್ನು ಯೋಜನೆಗಳಲ್ಲಿ ಸೇರಿಸಲಾಗಿತ್ತು. ಇದು ನಿರಂತರ ಪ್ರಕ್ರಿಯೆ ಎಂದರು.

ಜನತೆಗೆ ಯಾವ ಸಂದರ್ಭದಲ್ಲಿ ಯಾವ ರೀತಿಯ ಪರಿಹಾರ, ಪ್ರೋತ್ಸಾಹಕ ಪ್ಯಾಕೇಜ್ ಗಳನ್ನು ನೀಡಬೇಕು ಎಂದು ಎಫ್ಐಸಿಸಿಐ, ಸಿಐಐ, ಎಂಎಸ್ಎಂಇ, ಉದ್ಯಮ ಒಕ್ಕೂಟಗಳು ಮತ್ತು ಇತರ ಸಚಿವಾಲಯಗಳಿಂದ ಸಲಹೆಗಳನ್ನು ಪಡೆಯುತ್ತಿರುತ್ತೇವೆ. ಅವೆಲ್ಲವುಗಳನ್ನು ಪರೀಕ್ಷೆ ಮಾಡಿದ ನಂತರ ನಾವು ಮಧ್ಯೆ ಪ್ರವೇಶಿಸಿ ಪ್ರೋತ್ಸಾಹಕ ಪ್ಯಾಕೇಜ್ ಗಳಂತೆ ಈ ರೀತಿ ಮಧ್ಯೆ ಮಧ್ಯೆ ಘೋಷಿಸುತ್ತಿದ್ದೆವು. ಹಣಕಾಸು ಸಚಿವರು ಇದನ್ನೇ ಹೇಳಿಕೊಂಡು ಬಂದಿದ್ದರು ಎಂದರು.

ಆರ್ಥಿಕ ಸ್ಥಿತಿಗತಿ: ಲಾಕ್ ಡೌನ್ ತೆರವಾಗಿ ಇದೀಗ ಜನಜೀವನ, ಚಟುವಟಿಕೆಗಳು ಕೋವಿಡ್ ಪೂರ್ವ ಹಂತಕ್ಕೆ ತಲುಪಿದ್ದು, ಆರ್ಥಿಕತೆ ಹಿಂದಿನ ಸ್ಥಿತಿಗೆ ಸುಮಾರಾಗಿ ತಲುಪಿದೆ. ಆರ್ಥಿಕ ಪುನಶ್ಚೇತನವಾಗುತ್ತಿದೆ. ವಿದ್ಯುತ್ ಬಳಕೆ, ರಫ್ತು, ಆಮದು, ಎಲೆಕ್ಟ್ರಾನಿಕ್ ಬಿಲ್, ಜಿಎಸ್ಟಿ ಸಂಗ್ರಹದಿಂದ ನಿಮಗೆ ದೇಶದ ಒಟ್ಟಾರೆ ಆರ್ಥಿಕತೆ ಬಗ್ಗೆ ತಿಳಿಯುತ್ತದೆ ಎಂದರು.

ಕೋವಿಡ್ ಲಾಕ್ ಡೌನ್ ನಿಂದಾಗಿ ಕೆಲವು ವಲಯಗಳಿಗೆ ತೀವ್ರ ಆರ್ಥಿಕ ಹೊಡೆತವುಂಟಾಗಿದೆ. ಇನ್ನು ಕೆಲವು ಚೇತರಿಕೆಯತ್ತ ಹೆಜ್ಜೆಯಿಡುತ್ತಿದೆ.ಹೊಟೇಲ್ ಉದ್ಯಮ, ಸಾರಿಗೆ ಇನ್ನೂ ಹೊಡೆತದಲ್ಲಿದೆ. ರಿಯಲ್ ಎಸ್ಟೇಟ್ ವಲಯಕ್ಕೆ ಹಿಂದೆ ಸಮಸ್ಯೆಯಾಗಿತ್ತು, ಇಂದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ನಾವು ಪ್ರತಿ ವಲಯಗಳನ್ನು ವಿಶ್ಲೇಷಣೆ ಮಾಡುತ್ತಿದ್ದು ಇದೊಂದು ರೀತಿಯಲ್ಲಿ ನಿರಂತರ ಪ್ರಕ್ರಿಯೆ ಎಂದು ಅಜಯ್ ಭೂಷಣ್ ಪಾಂಡೆ ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಪಿಡುಗು ಇನ್ನೂ ಕೊನೆಯಾಗಿಲ್ಲ, ಆರ್ಥಿಕ ಪುನಶ್ಚೇತನ ಕಾಣುತ್ತಿದೆ. ನಾವು ತೆಗೆದುಕೊಂಡಿರುವ ಪರಿಹಾರ ಕ್ರಮಗಳಿಂದಾಗಿ ಫಲಿತಾಂಶ ಸಿಗುತ್ತಿದೆ, ಅದು ವಿವಿಧ ಹಂತಗಳಲ್ಲಿ ಮತ್ತು ವಿವಿಧ ಸಮಯಗಳಲ್ಲಿ ಆಗಿರಬಹುದು ಎಂದರು.

ಜಿಎಸ್ಟಿ ದರ ಕಡಿತ: ಜಿಎಸ್ಟಿ ದರ ಕಡಿತ ಸ್ಥಳೀಯ ಉದ್ಯಮ/ಕೈಗಾರಿಕೆಗಳು, ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದು ಜಿಎಸ್ಟಿ ದರ ಕಡಿತವನ್ನು ವರ್ಷಕ್ಕೊಂದು ಬಾರಿ ಅದು ಕೂಡ ಎಲ್ಲಾ ವಲಯಗಳನ್ನು ವಿಶ್ಲೇಷಣೆ ಮಾಡಿದ ನಂತರ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಜಿಎಸ್ ಟಿ ದರ ಕಡಿತ ಬಗ್ಗೆ, ದರ ಕಡಿತದಿಂದ ಯಾವಾಗಲೂ ಉದ್ಯಮಗಳಿಗೆ ಲಾಭವಾಗಬೇಕೆಂದೇನಿಲ್ಲ. ಆರ್ಥಿಕತೆಗೆ ದರ ಕಡಿತವನ್ನು ಹಿಂಪಡೆಯುವುದು ಸರಿಯಾದ ಕ್ರಮವಲ್ಲ. ಇದು ತೆರಿಗೆ ಸ್ಥಿರತೆಗೆ ವಿರುದ್ಧವಾಗಿದ್ದು ಸ್ಥಳೀಯ ಉದ್ಯಮ, ಕೈಗಾರಿಕೆಗಳಿಗೆ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com