ಎರಡು ಕಂತುಗಳಲ್ಲಿ ಗ್ರಾಹಕರಿಗೆ ಬಡ್ಡಿದರ ನೀಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ ನಿರ್ಧಾರ
ನವದೆಹಲಿ: ಉದ್ಯೋಗಿಗಳ ಬಡ್ಡಿಯನ್ನು 2019-20ನೇ ಸಾಲಿಗೆ ಎರಡು ಕಂತುಗಳಲ್ಲಿ ನೀಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ನಿರ್ಧರಿಸಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಹೂಡಿಕೆ ಮತ್ತು ಷೇರು ಮಾರುಕಟ್ಟೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.
ನಿನ್ನೆ ನಡೆದ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ತನ್ನ ಗ್ರಾಹಕರಿಗೆ 2019-20ನೇ ಸಾಲಿಗೆ ಶೇಕಡಾ 8.15ರಷ್ಟು ಬಡ್ಡಿಯನ್ನು ನೀಡಲು ಸಂಸ್ಥೆ ನಿರ್ಧರಿಸಿದೆ.
ಶೇಕಡಾ 8.5ರಷ್ಟು ಬಡ್ಡಿದರವನ್ನು ಈಗ ನೀಡಲು ಮತ್ತು ಉಳಿದ ಶೇಕಡಾ 0.35ರಷ್ಟು ಬಡ್ಡಿದರವನ್ನು ಡಿಸೆಂಬರ್ ನಲ್ಲಿ ಇಪಿಎಫ್ಒ ಷೇರು ಹೂಡಿಕೆಯಲ್ಲಿ ಕಡಿತ ಮಾಡಿ ನೀಡಲಾಗುವುದು ಎಂದು ನಿನ್ನೆ ನಡೆದ ಕೇಂದ್ರ ಟ್ರಸ್ಟಿ ಮಂಡಳಿಯ ಸಭೆಯಲ್ಲಿ ತಿಳಿಸಲಾಯಿತು. ಹಣಕಾಸು ಸಚಿವಾಲಯದ ಮುಂದೆ ಪ್ರಸ್ತಾವನೆಯನ್ನು ಮಂಡಿಸಲಾಗಿದ್ದು ಅಲ್ಲಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ಕೊರೋನಾ ಲಾಕ್ ಡೌನ್ ನಿಂದಾಗಿ ಭವಿಷ್ಯ ನಿಧಿ ಸಂಸ್ಥೆಗೆ ಶೇಕಡಾ 8.5ರಷ್ಟು ಬಡ್ಡಿದರ ನೀಡಿದರೆ 2,500 ಕೋಟಿ ರೂಪಾಯಿ ಕೊರತೆಯಾಗುತ್ತದೆ.
ಭವಿಷ್ಯನಿಧಿಯನ್ನು ಎರಡು ಕಂತುಗಳಲ್ಲಿ ನೀಡುವ ಬಗ್ಗೆ ನಿನ್ನೆ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ ವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಹಿಂದಿನ ವರ್ಷ ಸಂಸ್ಥೆ ತನ್ನ ಗ್ರಾಹಕರಿಗೆ ಶೇಕಡಾ 8.65ರಷ್ಟು ಬಡ್ಡಿದರವನ್ನು ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ