ಲಂಡನ್: ಬ್ರಿಟನ್‌ನಲ್ಲಿ ಲಸಿಕೆ ಉತ್ಪಾದನೆ, ಪ್ರಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಭಾರತದ ಪುಣೆಯಲ್ಲಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
240 ಮಿಲಿಯನ್ ಪೌಂಡ್ ಯೋಜನೆಯು ಮಾರಾಟ ಕಚೇರಿ, 'ಕ್ಲಿನಿಕಲ್ ಪ್ರಯೋಗಗಳು, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪ್ರಾಯಶಃ ಲಸಿಕೆಗಳ ತಯಾರಿಕೆ' ಯನ್ನು ಒಳಗೊಂಡಿರುತ್ತದೆ ಎಂದು ಜಾನ್ಸನ್ ಡೌನಿಂಗ್ ಸ್ಟ್ರೀಟ್ ಕಚೇರಿ ತಿಳಿಸಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾಗಿದ್ದು ಕಡಿಮೆ ಬೆಲೆಯ ಅಸ್ಟ್ರಾಜೆನೆಕಾ ಕೊರೊನಾವೈರಸ್ ಶಾಟ್ ಉತ್ಪಾದಿಸುವಲ್ಲಿ ಮುಂಚೂಣಿಯಲ್ಲಿದೆ. ಇನ್ನು ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯ ಮೊದಲ ಹಂತದ ಪ್ರಯೋಗಗಳನ್ನು ಪ್ರಾರಂಭಿಸಿದೆ.
ಈ ಮೂಲಕ ಅಲ್ಲಿ 6,500 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಮಂಗಳವಾರ ಜಾನ್ಸನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ವಾಸ್ತವ ಮಾತುಕತೆಗೆ ಮುಂಚಿತವಾಗಿ ಇದನ್ನು ಘೋಷಿಸಲಾಯಿತು.
ಕಳೆದ ವರ್ಷ ಯುರೋಪಿಯನ್ ಒಕ್ಕೂಟವನ್ನು ತೊರೆದ ನಂತರ ಗ್ಲೋಬಲ್ ಬ್ರಿಟನ್ ಕಾರ್ಯತಂತ್ರ ನಡೆಸುತ್ತಿರುವ ಬ್ರಿಟನ್ ಸರ್ಕಾರ ಭಾರತದೊಂದಿಗಿನ ವ್ಯಾಪಾರ ಪಾಲುದಾರಿಕೆಯನ್ನು ವೃದ್ಧಿಸಲು ಮುಂದಾಗಿದೆ. ಭಾರತಕ್ಕೆ ಹಣ್ಣು ಮತ್ತು ವೈದ್ಯಕೀಯ ಉಪಕರಣಗಳ ರಫ್ತು ಮಾಡಲು ಇರುವ ಅಡೆತಡೆಗಳನ್ನು ನಿವಾರಿಸುವ ಸಂಬಂಧ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್ ಮಾತುಕತೆ ನಡೆಸಲಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದ?
ಬ್ರೆಕ್ಸಿಟ್ ನಂತರದ "ಗ್ಲೋಬಲ್ ಬ್ರಿಟನ್" ಕಾರ್ಯತಂತ್ರದಡಿಯಲ್ಲಿ, ಜಾನ್ಸನ್ ಸರ್ಕಾರವು ತನ್ನ ವಿದೇಶಾಂಗ ನೀತಿಯ ಆದ್ಯತೆಗಳನ್ನು ಏಷ್ಯಾ-ಪೆಸಿಫಿಕ್ ಪ್ರದೇಶದ ಕಡೆಗೆ ತಿರುಗಿಸುತ್ತಿದೆ, ಜಪಾನ್ ಮತ್ತು ಸಿಂಗಾಪುರ ಸೇರಿದಂತೆ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ.
ಇನ್ನು ಬ್ರಿಟನ್ ಪ್ರವಾಸದಲ್ಲಿರುವ ಸೀರಮ್ ಸಂಸ್ಧೆ ಸಿಇಒ ಆದಾರ್ ಪೂನಾವಾಲಾ ಅಲ್ಲಿ ಹೂಡಿಕೆಯ ಬಗ್ಗೆ ಸರ್ಕಾರ ಹಾಗೂ ಖಾಸಗಿ ಕಂಪೆನಿಗಳ ಜತೆ ಮಾತುಕತೆ ನಡೆಸಿದ್ದಾರೆ.
Advertisement