ನವದೆಹಲಿ: ರಷ್ಯಾದ ಸಾರ್ವಭೌಮತ್ವ ಸಂಪತ್ತು ನಿಧಿ ಸಹಭಾಗಿತ್ವದಲ್ಲಿ ದೇಶದ ಪ್ರಮುಖ ಔಷಧೀಯ ಕಂಪನಿ ಪ್ಯಾನೇಶಿಯಾ ಬಯೋಟೆಕ್ ಭಾರತದಲ್ಲಿ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕೆಯನ್ನು ಉತ್ಪಾದನೆಯನ್ನು ಆರಂಭಿಸಿದೆ ಎಂದು ಜಂಟಿ ಹೇಳಿಕೆಯೊಂದರಲ್ಲಿ ಸೋಮವಾರ ತಿಳಿಸಲಾಗಿದೆ.
ರಷ್ಯಾ ನೇರ ಹೂಡಿಕೆ ನಿಧಿ ( ಆರ್ ಡಿಐಎಫ್ ) ಲಸಿಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಮತ್ತು ಪ್ಯಾನೇಶಿಯಾ ಬಯೋಟೆಕ್ ಭಾರತದಲ್ಲಿ ಪ್ರತಿ ವರ್ಷ 100 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಒಪ್ಪಿಕೊಂಡಿರುವುದಾಗಿ ಏಪ್ರಿಲ್ ನಲ್ಲಿ ಘೋಷಿಸಲಾಗಿತ್ತು.
ಹಿಮಾಚಲ ಪ್ರದೇಶದ ಬಾಡ್ಡಿಯಲ್ಲಿ ಪ್ಯಾನೇಶಿಯಾ ಬಯೋಟೆಕ್ ಉತ್ಪಾದಿಸುವ ಮೊದಲ ಹಂತದ ಕೋವಿಡ್-19 ಲಸಿಕೆಯ ಗುಣಮಟ್ಟ ನಿಯಂತ್ರಣಕ್ಕಾಗಿ ರಷ್ಯಾದ ಗಾಮೆಲೆಯಾ ಸೆಂಟರ್ ಗೆ ಕಳುಹಿಸಲಾಗುವುದು, ಪೂರ್ಣ ಪ್ರಮಾಣದ ಲಸಿಕೆ ಉತ್ಪಾದನೆ ಈ ವರ್ಷದ ಬೇಸಿಗೆಯಲ್ಲಿ ಆರಂಭವಾಗುವ ಸಾಧ್ಯತೆಯಿರುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ಯಾನೇಶಿಯಾ ಬಯೋಟೆಕ್ ಸಹಭಾಗಿತ್ವದಲ್ಲಿ ಲಸಿಕೆ ಉತ್ಪಾದನೆ ಆರಂಭಿಸುತ್ತಿರುವುದು ಕೋವಿಡ್ ಸಾಂಕ್ರಾಮಿಕ ವಿರುದ್ಧದ ದೇಶದ
ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಆರ್ ಡಿಐಎಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಿಲ್ ಡೆಮಿಟ್ರಿವ್ ಹೇಳಿದ್ದಾರೆ.
ಆರ್ ಡಿಐಎಫ್ ಸಹಭಾಗಿತ್ವದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಆರಂಭಿಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ. ದೇಶ ಹಾಗೂ ವಿಶ್ವದಾದ್ಯಂತ
ಸಹಜ ಪರಿಸ್ಥಿತಿಯನ್ನು ಮರಳಿ ತರಲು ನೆರವಾಗಲಿದೆ ಎಂಬ ಭರವಸೆಯಿದೆ ಎಂದು ಪ್ಯಾನೇಶಿಯಾ ಬಯೋಟೆಕ್ ವ್ಯವಸ್ಥಾಪಕ
ನಿರ್ದೇಶಕ ರಾಜೇಶ್ ಜೈನ್ ಹೇಳಿದ್ದಾರೆ.
ಕೊರೋನಾ ವಿರುದ್ಧ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯನ್ನು ಮೇ 14ರಿಂದ ಬಳಸಲಾಗುತ್ತಿದ್ದು, ದೇಶದಲ್ಲಿ ತುರ್ತು ಸಂದರ್ಭಗಳಲ್ಲಿ ಬಳಸಲು ಈ ಲಸಿಕೆ ನೋಂದಣಿಯಾಗಿದೆ.
Advertisement