ಅಗ್ಗದ ಬೆಲೆಯ ಮೊಪೆಡ್ ಗೆ ಐಷಾರಾಮಿ ವಸ್ತುವಿನ ತೆರಿಗೆ ಏಕೆ?: ಕೇಂದ್ರಕ್ಕೆ ಟಿವಿಎಸ್ ಪ್ರಶ್ನೆ
ನವದೆಹಲಿ: ಆಟೊಮೊಬೈಲ್ ಉದ್ಯಮದ ದಿಗ್ಗಜರು ವಾಹನಗಳ ಮೇಲೆ ಸರ್ಕಾರ ಅತ್ಯಧಿಕ ತೆರಿಗೆ ವಿಧಿಸುತ್ತಿರುವ ಬಗ್ಗೆ ದನಿಯೆತ್ತಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಕುಸಿಯುತ್ತಿರುವ ಆಟೊಮೊಬೈಲ್ ಉದ್ಯಮಕ್ಕೆ ನೆರವು ನೀಡುವುದಾಗಿ ದೊಡ್ಡ ದೊಡ್ಡ ಮಾತನಾಡುತ್ತದೆ, ಆದರೆ ಮಾರಾಟ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪವೂ ಇದೇ ಸಂದರ್ಭದಲ್ಲಿ ಕೇಳಿಬಂದಿದೆ.
ಜಿ ಎಸ್ ಟಿ ಇಂದಾಗಿ ಮೊಪೆಡ್ ಗಳ ಬೆಲೆ ಶೇ.45- 50 ಪ್ರತಿಶತ ಹೆಚ್ಚಾಗಿದೆ ಎಂದು ದೂರಿರುವ ಟಿವಿಎಸ್ ಚೇರ್ ಮೆನ್ ವೇಣು ಶ್ರೀನಿವಾಸನ್, ಜನಸಾಮನ್ಯರ ದೈನಂದಿನ ಓಡಾಟಕ್ಕೆ ಬೇಕಾಗುವ ಮೊಪೆಡ್ ಗಳ ಮೇಲೆ ಜಿ ಎಸ್ ಟಿ ವಿಧಿಸುವುದನ್ನು ಪ್ರಶ್ನಿಸಿದ್ದಾರೆ.
ಐಷಾರಾಮಿ ವಸ್ತುಗಳ ಮೇಲೆ ಜಿ ಎಸ್ ಟಿ ವಿಧಿಸುವುದಕ್ಕೆ ಅರ್ಥವಿದೆ ಅದರೆ ಮೊಪೆಡ್ ಗಳಿಗೆ ಐಷಾರಾಮಿ ವಸ್ತುಗಳ ಮಾದರಿಯಲ್ಲೇ ತೆರಿಗೆ ವಿಧಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾರುತಿ ಸುಜುಕಿ ಇಂಡಿಯಾ ಸಂಸ್ಥೆಯ ಚೇರ್ ಮೆನ್ ಆರ್ ಸಿ ಭಾರ್ಗವ ಅವರು ಜಪಾನ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟದಲ್ಲಿ ವಿಧಿಸಲಾಗುತ್ತಿರುವುದಕ್ಕಿಂತ ಹೆಚ್ಚಿನ ತೆರಿಗೆಯನ್ನು ಭಾರತದಲ್ಲಿ ವಿಧಿಸಲಾಗುತ್ತಿದೆ ಎಂದು ದೂರಿದ್ದಾರೆ.
ಜಿ ಎಸ್ ಟಿ ಮಾತ್ರವಲ್ಲದೆ ರಾಜ್ಯಗಳು ಒನ್ ಟೈಮ್ ರಸ್ತೆ ತೆರಿಗೆ ವಿಧಿಸುತ್ತವೆ. ಇದರಿಂದಾಗಿ ಕಾರುಗಳ ಮೇಲಿನ ತೆರಿಗೆ ಶೇ 37- 38 ಪ್ರತಿಶತಕ್ಕೆ ಬಂಡು ತಲುಪುತ್ತದೆ. ಹಲವು ಬಗೆಯ ತೆರಿಗೆಗಳಿಂದಲೇ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ವಾಹನಗಳು ಲಭ್ಯವಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ