ದಾಖಲೆ: ಮೊದಲ ದಿನ ಓಲಾ ಸ್ಕೂಟರ್ ಗಳಿಗೆ 1 ಲಕ್ಷ ಬುಕಿಂಗ್!

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟೆ ಪ್ರವೇಶಿಸುವುದಕ್ಕೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. 
ಓಲಾ ಸ್ಕೂಟರ್
ಓಲಾ ಸ್ಕೂಟರ್

ನವದೆಹಲಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟೆ ಪ್ರವೇಶಿಸುವುದಕ್ಕೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. 

ಪ್ರೀ ಬುಕಿಂಗ್ ಪ್ರಾರಂಭವಾದ 24 ಗಂಟೆಗಳಲ್ಲಿ 1 ಲಕ್ಷ ಸ್ಕೂಟರ್ ಗಳು ಪ್ರೀ ಬುಕಿಂಗ್ ಆಗಿದ್ದು, ಜಗತ್ತಿನಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಂಗಡವಾಗಿ ಕಾಯ್ದಿರಿಸಲಾದ ಸ್ಕೂಟರ್ ಬ್ರಾಂಡ್ ಎಂಬ ದಾಖಲೆಯನ್ನು ನಿರ್ಮಿಸಿದೆ. 
 
ಜುಲೈ.15 ರಂದು ಸಂಜೆ ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಕೇವಲ 499 ರೂಪಾಯಿಗಳೊಂದಿಗೆ ಮುಂಗಡ ಕಾಯ್ದಿರಿಸುವಿಕೆಯನ್ನು-ತನ್ನ ಅಧಿಕೃತ ವೆಬ್ ಸೈಟ್ olaelectric.com ನಲ್ಲಿ ಪ್ರಾರಂಭಿಸಿತ್ತು.

"ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ಗ್ರಾಹಕರಿಂದ ಲಭ್ಯವಾಗುತ್ತಿರುವ ಪ್ರಚಂಡ ಪ್ರತಿಕ್ರಿಯೆಯಿಂದ ಹೆಚ್ಚಿನ ಸ್ಫೂರ್ತಿ ದೊರೆತಿದೆ. ಇದು ಅಭೂತಪೂರ್ವ ಬೇಡಿಕೆಯಾಗಿದ್ದು, ಗ್ರಾಹಕರು ಎಲೆಕ್ಟ್ರಿಕ್ ವಾಹನಗಳೆಡೆಗೆ ವರ್ಗಾವಣೆಯಾಗುತ್ತಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ ಎಂದು ಓಲಾ ಸಿಇಒ, ಅಧ್ಯಕ್ಷ ಭವೀಶ್ ಅಗರ್ವಾಲ್ ಹೇಳಿದ್ದಾರೆ. 

"ಇದು ಕೇವಲ ಆರಂಭವಾಗಿದ್ದು, ಸ್ಕೂಟರ್ ನ್ನು ಕಾಯ್ದಿರಿಸಿರುವ ಎಲ್ಲಾ ಗ್ರಾಹಕರಿಗೂ ಧನ್ಯವಾದ ತಿಳಿಸುತ್ತೇನೆ" ಎಂದು ಸಿಇಒ ಹೇಳಿದ್ದಾರೆ. ಸಂಸ್ಥೆ ಹಿಂದೆಂದೂ ಕಂಡಿರದಂತಹ ಬೇಡಿಕೆಯನ್ನು ಗ್ರಾಹಕರಿಂದ ಕಾಣುತ್ತಿದ್ದು ಬುಕಿಂಗ್ ಮುಂದುವರೆದಿದೆ ಎಂದು ಓಲಾ ಸಂಸ್ಥೆ ತಿಳಿಸಿದೆ. 

ಹೆಚ್ಚಿನ ವೇಗ, ರೇಂಜ್, ಬೂಟ್ ಸ್ಪೇಸ್ ನ್ನು ಹೊಂದಿರಲಿರುವ ಓಲಾ ವಿದ್ಯುತ್ ಚಾಲಿತ ಸ್ಕೂಟರ್ ಗಳು ತಾಂತ್ರಿಕವಾಗಿಯೂ ಅತ್ಯಾಧುನಿಕವಾಗಿರಲಿದೆ. ಸ್ಕೂಟರ್ ಬೆಲೆಯೂ ಕೈಗೆಟುಕುವ ದರದಲ್ಲಿರಲಿದ್ದು, ಜಾಗತಿಕ ಮಟ್ಟದಲ್ಲಿ ಮೇಡ್ ಇನ್ ಇಂಡಿಯಾ ಸ್ಕೂಟರ್ ಗಳು ಕಾಣಲಿವೆ. 

ಓಲಾದ ಫ್ಯೂಚರ್ ಫ್ಯಾಕ್ಟರಿಯಲ್ಲಿ ಈ ವಿದ್ಯುತ್ ಚಾಲಿತ ವಾಹನಗಳು ತಯಾರಾಗಲಿದ್ದು ಮುಂದಿನ ವರ್ಷದ ವೇಳೆಗೆ 10 ಮಿಲಿಯನ್ ವಾಹನಗಳು ಇಲ್ಲಿ ಉತ್ಪಾದನೆಯಾಗುವ ಗುರಿ ಹೊಂದಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com