ನವದೆಹಲಿ: ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ(ವಿ) ನಂತರ ಭಾರತದ ಅತಿದೊಡ್ಡ ಮೊಬೈಲ್ ಆಪರೇಟರ್ ರಿಲಯನ್ಸ್ ಜಿಯೋ ಸಹ ದರ ಏರಿಕೆ ಶಾಕ್ ನೀಡಿದ್ದು, ಮುಂದಿನ ತಿಂಗಳಿನಿಂದ ತನ್ನ ಪ್ರಿಪೇಯ್ಡ್ ದರಗಳಲ್ಲಿ ಶೇಕಡಾ 21 ರಷ್ಟು ಹೆಚ್ಚಳ ಮಾಡುವುದಾಗಿ ಭಾನುವಾರ ಘೋಷಿಸಿದೆ.
ದರ ಹೆಚ್ಚಳವು ಜಿಯೋ ಫೋನ್ ಯೋಜನೆ, ಅನಿಯಮಿತ ಯೋಜನೆಗಳು ಮತ್ತು ಡೇಟಾವನ್ನು ಒಳಗೊಂಡಿದ್ದು, ಶೇ. 19.6 ರಿಂದ ಶೇ. 21.3 ರಷ್ಟು ಹೆಚ್ಚಳ ಮಾಡಲಾಗಿದೆ.
ಈ ಯೋಜನೆಗಳು ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ಒದಗಿಸುತ್ತವೆ. ಜಾಗತಿಕವಾಗಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಜಿಯೋ ತನ್ನ ಬದ್ಧತೆಯನ್ನು ಎತ್ತಿ ಹಿಡಿಯುವ ಮೂಲಕ, ಜಿಯೋ ಗ್ರಾಹಕರು ದೊಡ್ಡ ಫಲಾನುಭವಿಗಳಾಗಿ ಮುಂದುವರಿಯುತ್ತಾರೆ ಎಂದು ಆಶಿಸುವುದಾಗಿ ಜಿಯೋ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಯೋ ಅಗ್ಗದ ದರಗಳೊಂದಿಗೆ ಭಾರತದಲ್ಲಿ ಡೇಟಾ ಕ್ರಾಂತಿಯನ್ನು ತಂದಿದೆ. ಹೊಸ ಅನಿಯಮಿತ ಯೋಜನೆಗಳು ಡಿಸೆಂಬರ್ 1 ರಂದು ಜಾರಿಗೆ ಬರಲಿವೆ. ಈಗ ಅಸ್ತಿತ್ವದಲ್ಲಿರುವ ಎಲ್ಲಾ ಟಚ್ ಪಾಯಿಂಟ್ ಗಳು ಮತ್ತು ಚಾನಲ್‌ಗಳಿಂದ ಆಯ್ಕೆ ಮಾಡಬಹುದು ಎಂದು ಕಂಪನಿಯು ಘೋಷಿಸಿದೆ.
ಪ್ರತಿಸ್ಪರ್ಧಿ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್ ಟೆಲ್ ಹಾಗೂ ವೊಡಾಫೋನ್ ಐಡಿಯಾ ಕಳೆದ ವಾರ ತನ್ನ ಪ್ರಿಪೇಯ್ಡ್ ದರಗಳನ್ನು ಶೇ.25 ರವರೆಗೆ ಹೆಚ್ಚಿಸಿದ್ದವು.
Advertisement