ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಸಂಗ್ರಹ ಶೇ.88ರಷ್ಟು ಹೆಚ್ಚಳ; 3.35 ಲಕ್ಷ ಕೋಟಿ ರೂ. ಸಂಗ್ರಹ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿದ ನಂತರ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು ಶೇ.88 ರಷ್ಟು ಹೆಚ್ಚಳವಾಗಿದ್ದು, 3.35 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಲೋಕಸಭೆಗೆ ಸೋಮವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
Published: 30th November 2021 07:05 PM | Last Updated: 30th November 2021 07:07 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿದ ನಂತರ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು ಶೇ.88 ರಷ್ಟು ಹೆಚ್ಚಳವಾಗಿದ್ದು, 3.35 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಲೋಕಸಭೆಗೆ ಸೋಮವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕಳೆದ ವರ್ಷ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಗೆ 19.98 ರೂ.ಯಿಂದ 32.9 ರೂ.ಗೆ ಹೆಚ್ಚಿಸಲಾಯಿತು. ಅದೇ ರೀತಿ ಡೇಸೆಲ್ ಮೇಲಿನ ಸುಂಕವನ್ನು 15.83 ರೂ.ನಿಂದ 31.8 ರೂ.ಗೆ ಏರಿಸಲಾಗಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸಂಗ್ರಹವು 2020-21 ರಲ್ಲಿ (ಏಪ್ರಿಲ್ 2020 ರಿಂದ ಮಾರ್ಚ್ 2021 ರವರೆಗೆ) 3.35 ಲಕ್ಷ ಕೋಟಿ ರೂ. ಆಗಿದೆ. ಒಂದು ವರ್ಷದ ಹಿಂದೆ 1.78 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. 2020-21ನೇ ಹಣಕಾಸು ವರ್ಷದಲ್ಲಿ ಎಕ್ಸೈಸ್ ಸುಂಕದಿಂದ ಸಂಗ್ರಹ ಆಗಿರುವ ಒಟ್ಟಾರೆ ಮೊತ್ತದಲ್ಲಿ ರಾಜ್ಯಗಳಿಗೆ 19,972 ರೂ. ಕೋಟಿ ನೀಡಲಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.
2018-19ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸಂಗ್ರಹ 2.13 ಲಕ್ಷ ಕೋಟಿ ರೂ. ಆಗಿದೆ. ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಈ ವರ್ಷದ ಏಪ್ರಿಲ್-ಜೂನ್‌ನಲ್ಲಿ ಒಟ್ಟು 1.01 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.
ಇದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾತ್ರವಲ್ಲದೆ ಎಟಿಎಫ್, ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲದ ಮೇಲಿನ ಅಬಕಾರಿ ಸುಂಕಗಳು ಒಳಗೊಂಡಿವೆ ಎಂದಿದ್ದಾರೆ. FY21 ರಲ್ಲಿ ಒಟ್ಟು ಅಬಕಾರಿ ಸಂಗ್ರಹವು 3.89 ಲಕ್ಷ ಕೋಟಿ ರೂ. ಆಗಿದೆ. ಸದ್ಯ ಲೀಟರ್ಗೆ ಪೆಟ್ರೋಲ್ ಮೇಲಿನ ಮೂಲ ಎಕ್ಸೈಸ್ ಸುಂಕ 1.40 ರೂ. ಮತ್ತು ಡೀಸೆಲ್ ಮೇಲಿನ ಮೂಲ ಎಕ್ಸೈಸ್ ಸುಂಕ ಲೀಟರಿಗೆ 1.80 ರೂ. ಇದೆ.