ಭಾರತದ ಮೊದಲ ಟ್ವಿಟ್ಟರ್ ಬಳಕೆದಾರ ಯಾರು? ಎಲೋನ್ ಮಸ್ಕ್, ಬ್ಲೂ ಟಿಕ್ ಗೆ ಶುಲ್ಕ ವಿಧಿಸುವ ಬಗ್ಗೆ ಅವರೇನಂತಾರೆ?

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟ್ಟರ್ ಸಂಸ್ಥೆಯನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಂಡು ಭಾರತೀಯ ಮೂಲದ ಸಿಇಒ ಸೇರಿದಂತೆ ಹಲವು ಉದ್ಯೋಗಿಗಳನ್ನು ವಜಾ ಮಾಡಿದ್ದು ಸುದ್ದಿಯಾಗಿತ್ತು. ಎಲೋನ್ ಮಸ್ಕ್ ಅವರು ಟ್ವಿಟ್ಟರ್ ನ ಸ್ವಾಧೀನಪಡಿಸಿಕೊಂಡ ನಂತರ ಹಲವು ಬದಲಾವಣೆಗಳು ಕೂಡ ಮುಂದಿನ ದಿನಗಳಲ್ಲಿ ಆಗಲಿವೆಯಂತೆ. 
ನೈನಾ ರೆಧು
ನೈನಾ ರೆಧು

ನವದೆಹಲಿ: ಟೆಸ್ಲಾ ಸಿಇಒ ಎಲೋನ್ ಮಸ್ಕ್(Elon Musk) ಇತ್ತೀಚೆಗೆ ಟ್ವಿಟ್ಟರ್ ಸಂಸ್ಥೆಯನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಂಡು ಭಾರತೀಯ ಮೂಲದ ಸಿಇಒ ಸೇರಿದಂತೆ ಹಲವು ಉದ್ಯೋಗಿಗಳನ್ನು ವಜಾ ಮಾಡಿದ್ದು ಸುದ್ದಿಯಾಗಿತ್ತು. ಎಲೋನ್ ಮಸ್ಕ್ ಅವರು ಟ್ವಿಟ್ಟರ್ ನ ಸ್ವಾಧೀನಪಡಿಸಿಕೊಂಡ ನಂತರ ಹಲವು ಬದಲಾವಣೆಗಳು ಕೂಡ ಮುಂದಿನ ದಿನಗಳಲ್ಲಿ ಆಗಲಿವೆಯಂತೆ. 

ಈ ಮಧ್ಯೆ ಭಾರತದಲ್ಲಿ ಟ್ವಿಟ್ಟರ್ ನ್ನು(Twitter) ಮೊದಲ ಬಾರಿಗೆ ಬಳಕೆ ಮಾಡಿದ್ದು ಯಾರು ಎಂಬ ಬಗ್ಗೆ ಕುತೂಹಲ ಇರುತ್ತದೆ. ಅವರು ಟ್ವಿಟ್ಟರ್ ಬಳಕೆಯನ್ನು ಹೇಗೆ ಆರಂಭಿಸಿದರು, ಆರಂಭದ ದಿನಗಳಲ್ಲಿ ಹೇಗಿದ್ದವು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ದಶಕದ ಹಿಂದೆ ಒರ್ಕುಟ್ ಮತ್ತು ಮೈಕ್ರೊ ಬ್ಲಾಗಿಂಗ್ ಸೈಟ್ ಹೆಚ್ಚು ಜನಪ್ರಿಯವಾಗಿದ್ದ ಸಮಯವದು, ಆಗಿನ್ನೂ ಟ್ವಿಟ್ಟರ್ ಅಧಿಕೃತವಾಗಿ ಆರಂಭವಾಗಿರಲಿಲ್ಲ. ಓರ್ವ ಮಹಿಳೆಗೆ 2006ರಲ್ಲಿ TWTTR(ಟ್ವಿಟ್ಟರ್ ಪ್ರಾಜೆಕ್ಟ್ ನ ಕೋಡ್ ಹೆಸರು) ನಿಂದ ಒಂದು ಇಮೇಲ್ ಬರುತ್ತದೆ. ಹೊಸ ಸೋಷಿಯಲ್ ಮೀಡಿಯಾ ವೇದಿಕೆಗೆ ಸೇರಿಕೊಳ್ಳಿ ಎಂದು ಬಂದ ಇಮೇಲ್ ಸಂದೇಶವದು. ಆಕೆ ಅದಕ್ಕೆ ಸೇರಿಕೊಂಡರು, ಈ ಮೂಲಕ ಟ್ವಿಟ್ಟರ್ ಗೆ ಭಾರತದಲ್ಲಿ ಮೊದಲು ಸೇರಿಕೊಂಡ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದರು.

ಆ ಮಹಿಳೆಯೇ ನೈನಾ ರೆಧು, ಅವರಿಂದು ಜೈಸಲ್ಮೆರ್ ನಲ್ಲಿ ಹೊಟೇಲ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ 1 ಲಕ್ಷದ 75 ಸಾವಿರ ಟ್ವೀಟ್ ಗಳನ್ನು ಮಾಡಿದ್ದಾರೆ. ಎಎನ್ಐ ಸುದ್ದಿಸಂಸ್ಥೆ ಅವರನ್ನು ಮಾತನಾಡಿಸಿದಾಗ, ಅಂದಿನಿಂದ ಇಂದಿನವರೆಗೆ ಟ್ವಿಟ್ಟರ್ ಎಷ್ಟು ಬದಲಾಗಿದೆ, ಎಲೋನ್ ಮಸ್ಕ್ ಅವರು ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ಬಗ್ಗೆ ಅವರ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ.

ನನಗೆ ಇನ್ನೂ ನೆನಪಿದೆ, ಟ್ವಿಟರ್‌ನಿಂದ ಇ-ಮೇಲ್ ಮೂಲಕ ಆಹ್ವಾನ ಬಂದಿತ್ತು. ಆ ಸಮಯದಲ್ಲಿ ಅದನ್ನು TWTTR ಎಂದು ಹೆಸರಿಸಲಾಯಿತು, ಈಗ ಕಾಗುಣಿತ ಬದಲಾಗಿದೆ. ಸೈನ್ ಅಪ್ ಮಾಡಿ ಅನ್ವೇಷಿಸೋಣ ಎಂದು ಯೋಚಿಸಿ ನಾನು ಸೇರಿಕೊಂಡೆ, ಇದು ಕೇವಲ ಕಾಕತಾಳೀಯ ಮತ್ತು ಭವಿಷ್ಯದಲ್ಲಿ ಇದು ಇಷ್ಟು ದೊಡ್ಡ ವೇದಿಕೆಯಾಗಲಿದೆ ಎಂದು ನಾನು ಭಾವಿಸಿರಲಿಲ್ಲ ಎಂದು ನೈನಾ ರೆಧು ಆ ಸಮಯವನ್ನು ನೆನಪಿಸಿಕೊಂಡರು.

ಟ್ವಿಟ್ಟರ್‌ನಲ್ಲಿ ಏಕೈಕ ಭಾರತೀಯಳಾಗಿ ಅಂದು ಬಳಕೆ ಮಾಡುತ್ತಿದ್ದ ಬಗ್ಗೆ ಕೇಳಿದಾಗ, ಆ ಸಮಯದಲ್ಲಿ ಭಾರತದಿಂದ ಯಾರೂ ಟ್ವಿಟ್ಟರ್ ಬಳಕೆ ಮಾಡುತ್ತಿರಲ್ಲ. ನಾನು ನೋಡಿದ ಚಾಟ್‌ಗಳು ಟ್ವಿಟರ್ ಉದ್ಯೋಗಿಗಳು ಅಥವಾ ಅವರ ಸ್ನೇಹಿತರಿಂದ ಬಂದವುಗಳಾಗಿದ್ದವು. ಅವರು ಪರಸ್ಪರ ಸಂದೇಶಗಳನ್ನು ಕಳುಹಿಸುತ್ತಿದ್ದರು. ನಾನು ಆಗ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಅವರೊಂದಿಗೆ ಏನು ಮಾತನಾಡಬಹುದು ಎಂದು ನನಗೆ ಅನಿಸುತ್ತಿತ್ತು. ಆರಂಭದಲ್ಲಿ ನಾನು ಸುಮಾರು ಒಂದೂವರೆ ವರ್ಷಗಳ ಕಾಲ ಟ್ವಿಟರ್ ಅನ್ನು ಬಳಸದೆ ಇರಲು ಅದು ಒಂದು ಕಾರಣವಾಗಿತ್ತು ಎನ್ನುತ್ತಾರೆ.

ತಾನು ಛಾಯಾಗ್ರಾಹಕಿ, ಕಲಾವಿದೆ ಮತ್ತು ಅನುಭವ ಸಂಗ್ರಾಹಕಿ ಎಂದು ಪರಿಚಯಿಸುವ ನೈನಾ ಅವರ ಟ್ವಿಟರ್ ಬಯೋದಲ್ಲಿ ಅವರು ಭಾರತದಲ್ಲಿ ಮೊದಲ ಟ್ವಿಟರ್ ಬಳಕೆದಾರರೆಂದು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ.

ಇದೊಂದು ಸಾಧನೆಯಲ್ಲ, ಕೇವಲ ಕಾಕತಾಳೀಯವಷ್ಟೆ, ಇದು ನನ್ನ ಜೀವನಚರಿತ್ರೆಯಲ್ಲಿ ಉಲ್ಲೇಖಿಸಬೇಕಾದ ವಿಷಯ ಎಂದು ನಾನು ಭಾವಿಸುವುದಿಲ್ಲ. ಇದರಲ್ಲಿ ನನ್ನದು ಹೇಳಿಕೊಳ್ಳುವಂತಹ ಶ್ರಮವಿಲ್ಲ. USA ಯಿಂದ ಯಾರೋ ಮೊದಲ 140 ಟ್ವಿಟರ್ ಬಳಕೆದಾರರ ಬಗ್ಗೆ ಲೇಖನವನ್ನು ಬರೆದಾಗ ಆ ಪಟ್ಟಿಯಲ್ಲಿ ನನ್ನ ಹೆಸರಿತ್ತು ಎನ್ನುತ್ತಾರೆ ನೈನಾ. 

ನೈನಾ ರೆಧು ಸಕ್ರಿಯ ಟ್ವಿಟರ್ ಬಳಕೆದಾರರಾಗಿದ್ದು, ಅವರ ಪ್ರೊಫೈಲ್‌ನಲ್ಲಿ ನೀಲಿ ಟಿಕ್ ಕೂಡ ಇದೆ, ಇದು ಇತ್ತೀಚಿನ ದಿನಗಳಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ, ಬಳಕೆದಾರರು ಬ್ಲೂ ಟಿಕ್ ಬಯಸಿದರೆ, 8 ಡಾಲರ್ ಅಂದರೆ ಸುಮಾರು 650 ರೂಪಾಯಿ ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಹೊಸ ನಿಯಮ ಬರುತ್ತಿದೆ.

ಸದ್ಯಕ್ಕೆ ಯಾವುದಕ್ಕೆ ಶುಲ್ಕ ವಿಧಿಸಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ನೀಲಿ ಟಿಕ್‌ನ ಅರ್ಥವು ಈಗಿರುವಂತೆಯೇ ಉಳಿಯುತ್ತದೆಯೇ ಅಥವಾ ಅದು ಬದಲಾಗುತ್ತದೆಯೇ, ಒಮ್ಮೆ ಈ ಬಗ್ಗೆ ಸ್ಪಷ್ಟತೆ ಬಂದರೆ ಮಾತ್ರ ನಾನು ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದೊಂದು ಖಾಸಗಿ ಕಂಪನಿ ಮತ್ತು ಅವರು ಬಳಕೆದಾರರಿಗೆ ಬ್ಲೂ ಟಿಕ್ ನೀಡಲು ಪ್ರಾರಂಭಿಸಲು ಕಾರಣವೆಂದರೆ ಅದು ಸಾರ್ವಜನಿಕ ವ್ಯಕ್ತಿಯ ನಿಜವಾದ ಖಾತೆ ಎಂದು ಪರಿಶೀಲಿಸಲು. ಕಳೆದ 16 ವರ್ಷಗಳಲ್ಲಿ ಹಣ ನೀಡಿರಲಿಲ್ಲ, ಈಗೇಕೆ ಎಂದು ನನಗೂ ಅನಿಸುತ್ತದೆ ಎಂದು ನೈನಾ ರೆಧು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com