ಡಿಸೆಂಬರ್ 2021 ರಲ್ಲೇ ಕೋವಿಶೀಲ್ಡ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ: ಪೂನಾವಾಲ
ಪುಣೆ: ಕೋವಿಡ್ ಲಸಿಕೆ ಕೋವಿಶೀಲ್ಡ್ ಉತ್ಪಾದನೆಯನ್ನು ಕಳೆದ ವರ್ಷ ಡಿಸೆಂಬರ್ ನಲ್ಲೇ ಸ್ಥಗಿತಗೊಳಿಸಲಾಗಿದೆ ಮತ್ತು ಆ ಸಮಯದಲ್ಲಿ ಲಭ್ಯವಿದ್ದು ಒಟ್ಟು ಸ್ಟಾಕ್‌ನಲ್ಲಿ ಸುಮಾರು 100 ಮಿಲಿಯನ್ ಡೋಸ್ ಲಸಿಕೆಯ ಅವಧಿ ಈಗಾಗಲೇ ಮುಗಿದಿದೆ ಎಂದು ಲಸಿಕೆ ತಯಾರಕ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಅವರು ಗುರುವಾರ ಹೇಳಿದ್ದಾರೆ.
ಪುಣೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಲಸಿಕೆ ತಯಾರಕರ ನೆಟ್‌ವರ್ಕ್‌ನ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೂನಾವಾಲಾ, ಸಾಂಕ್ರಾಮಿಕ ರೋಗ ಮತ್ತು ಲಸಿಕೆಗಳಿಂದ ಜನ ಬೇಸತ್ತು ಹೋಗಿರುವುದರಿಂದ ಬೂಸ್ಟರ್ ಡೋಸ್ ಗಳಿಗೆ ಬೇಡಿಕೆಯಿಲ್ಲ ಎಂದು ಹೇಳಿದ್ದಾರೆ.
"ಡಿಸೆಂಬರ್ 2021 ರಿಂದ ನಾವು ಕೋವಿಶೀಲ್ಡ್‌ನ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಆ ಸಮಯದಲ್ಲಿ ನಮ್ಮಲ್ಲಿ ನೂರಾರು ಮಿಲಿಯನ್ ಡೋಸ್‌ಗಳ ಸ್ಟಾಕ್ ಇತ್ತು ಮತ್ತು ಅದರಲ್ಲಿ 100 ಮಿಲಿಯನ್ ಡೋಸ್‌ಗಳು ಈಗಾಗಲೇ ಅವಧಿ ಮುಗಿದಿವೆ" ಎಂದು ಪೂನಾವಾಲ ತಿಳಿಸಿದ್ದಾರೆ.
ಇದೇ ವೇಳೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಲಸಿಕೆಗಳನ್ನು ಮಿಶ್ರಣ ಮಾಡಲು ಅನುಮತಿಸಲಾಗಿದೆ ಎಂದು ಅವರು ಹೇಳಿದರು.
"ಈಗ ಕೋವೋವ್ಯಾಕ್ಸ್ ಅನ್ನು ಎರಡು ವಾರಗಳಲ್ಲಿ ಅನುಮತಿಸಬೇಕು. ಅವರು ಬೂಸ್ಟರ್‌ಗಳನ್ನು ಮಿಶ್ರಣ ಮಾಡುವ ನೀತಿಯನ್ನು ಹೊಂದಿರುತ್ತಾರೆ ಮತ್ತು ಅನುಮತಿ ನೀಡಬಹುದು ಎಂದು ನಾನು ಭಾವಿಸುತ್ತೇನೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಅನುಮತಿಸಿದರೆ, ಬಹುಶಃ ಭಾರತೀಯ ನಿಯಂತ್ರಕರೂ ಅದನ್ನು ಅನುಮತಿಸಬಹುದು ಮತ್ತು ಅನುಮತಿಸಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೂಸ್ಟರ್‌ಗಳಿಗೆ ಯಾವುದೇ ಬೇಡಿಕೆಯಿಲ್ಲ ಎಂದು ಪೂನಾವಾಲ ತಿಳಿಸಿದ್ದಾರೆ.