ಕ್ಯೂಆರ್ ಕೋಡ್ ಸುಟ್ಟುಹಾಕಿದ ಆರೋಪ: ಪೇಟಿಎಂ ಉದ್ಯೋಗಿಗಳ ವಿರುದ್ಧ ಫೋನ್ ಪೇ ದೂರು

ತಮ್ಮ ಕ್ಯೂ ಆರ್ ಕೋಡ್‌ಗಳನ್ನು ಸುಟ್ಟುಹಾಕಿದ ಆರೋಪದ ಮೇಲೆ ಡಿಜಿಟಲ್ ಪಾವತಿ ಪೂರೈಕೆದಾರ ಫೋನ್ ಪೇ,  ಪ್ರತಿಸ್ಪರ್ಧಿ ಪೇಟಿಎಂ ನ ಉದ್ಯೋಗಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತಮ್ಮ ಕ್ಯೂ ಆರ್ ಕೋಡ್‌ಗಳನ್ನು ಸುಟ್ಟುಹಾಕಿದ ಆರೋಪದ ಮೇಲೆ ಡಿಜಿಟಲ್ ಪಾವತಿ ಪೂರೈಕೆದಾರ ಫೋನ್ ಪೇ,  ಪ್ರತಿಸ್ಪರ್ಧಿ ಪೇಟಿಎಂ ನ ಉದ್ಯೋಗಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

ಮೂವರು ಪೇಟಿಎಂ ಉದ್ಯೋಗಿಗಳು ಅದರ ಕ್ಯೂ ಆರ್ ಕೋಡ್‌ಗಳನ್ನು ಸುಟ್ಟುಹಾಕಿದ್ದಾರೆ ಎಂದು ಫೋನ್ ಪೇ ಹೇಳಿಕೊಂಡಿದೆ. ಈ  ಸಂಬಂಧ ನೋಯ್ಡಾದ ಸೂರಜ್‌ಪುರ ಲಖನವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೋನ್‌ಪೇ ತನ್ನ ಕ್ಯೂಆರ್ ಕೋಡ್‌ಗಳ ರಾಶಿಯನ್ನು ಸುಟ್ಟುಹಾಕುತ್ತಿರುವ ವೀಡಿಯೊದ ಆಧಾರದ ಮೇಲೆ ಪೊಲೀಸರನ್ನು ಸಂಪರ್ಕಿಸಿದೆ. ಫೋನ್ ಪೇ ವಕ್ತಾರರು ವೀಡಿಯೊದಲ್ಲಿರುವ ಮೂವರನ್ನು ಪೇಟಿಎಂ ಉದ್ಯೋಗಿಗಳು ಎಂದು ಗುರುತಿಸಿದ್ದಾರೆ.

ಮೂವರಲ್ಲಿ ಒಬ್ಬರು ಪೇಟಿಎಂ ಏರಿಯಾ ಸೇಲ್ಸ್ ಮ್ಯಾನೇಜರ್ ಎಂದು ಹೇಳಲಾಗಿದ್ದು, ಮತ್ತೊಬ್ಬರು ಪೇಟಿಎಂನ ಮಾಜಿ ಉದ್ಯೋಗಿ ಎಂದು ಗುರುತಿಸಲಾಗಿದೆ. ಅಮನ್ ಕುಮಾರ್ ಗುಪ್ತಾ, ದೇವಾಂಶು ಗುಪ್ತಾ ಮತ್ತು ರಾಹುಲ್ ಪಾಲ್ ಸೇರಿದಂತೆ ಮೂವರು ಕ್ಯೂಆರ್ ಕೋಡ್‌ಗಳನ್ನು ಸುಟ್ಟಹಾಕಿದ ಆರೋಪ ಹೊತ್ತಿದ್ದಾರೆ.

ದೇವಾಂಶು ಗುಪ್ತಾ 2018 ರಿಂದ 2022 ರವರೆಗೆ ಫೋನ್ ಪೇ ಕಂಪನಿಯಲ್ಲಿ  ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ದೇವಾಂಶು  ಗುಪ್ತಾ ಅವರು QR ಕೋಡ್‌ಗಳನ್ನು ಎಲ್ಲಿಂದ ಪಡೆಯಬಹುದೆಂದು ತಿಳಿದಿದ್ದರು ಮತ್ತು ಅವುಗಳನ್ನು ಕದಿಯಲು ಮತ್ತು ವಿಧ್ವಂಸಗೊಳಿಸಲು ಇತರರೊಂದಿಗೆ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೇಟಿಎಂ ವಕ್ತಾರರು, ಈ ಕೃತ್ಯದಲ್ಲಿ ಭಾಗಿಯಾಗಿರುವವರು ಫೋನ್ ಪೇನ ಮಾಜಿ ಕೆಲಸಗಾರರು ಎಂದು ಹೇಳಿದ್ದಾರೆ.

ಫೋನ್‌ಪೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮೀರ್ ನಿಗಮ್ ಟ್ವಿಟರ್‌ನಲ್ಲಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಪೊಲೀಸರು ಈ ವಿಷಯವನ್ನು ತನಿಖೆ ಮಾಡಬೇಕು ಮತ್ತು ನ್ಯಾಯವು ಮೇಲುಗೈ ಸಾಧಿಸಲಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com