ಆರ್ ಬಿಐ ವಿತ್ತೀಯ ನೀತಿ ಪ್ರಕಟ: ರೆಪೊ ದರ 35 ಮೂಲಾಂಶ ಹೆಚ್ಚಿಸಿ ಶೇಕಡಾ 6.25ಕ್ಕೆ ಏರಿಕೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣದುಬ್ಬರವನ್ನು ನಿಯಂತ್ರಿಸಲು ಬುಧವಾರ ಬ್ಯಾಂಕುಗಳಿಗೆ ನೀಡುವ ಸಾಲದ ದರವನ್ನು 35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದು ಇದರಿಂದ ರೆಪೊ ದರ(Repo Rate) ಶೇಕಡಾ 6.25ಕ್ಕೆ ಏರಿಕೆಯಾಗಿದೆ. 
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣದುಬ್ಬರವನ್ನು ನಿಯಂತ್ರಿಸಲು ಬುಧವಾರ ಬ್ಯಾಂಕುಗಳಿಗೆ ನೀಡುವ ಸಾಲದ ದರವನ್ನು 35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದು ಇದರಿಂದ ರೆಪೊ ದರ(Repo Rate) ಶೇಕಡಾ 6.25ಕ್ಕೆ ಏರಿಕೆಯಾಗಿದೆ. 

ಈ ಮೂಲಕ, ರೆಪೊ ದರ ಅಥವಾ ಬ್ಯಾಂಕ್‌ಗಳು ಆರ್ ಬಿಐನಿಂದ ಸಾಲ ಪಡೆಯುವ ಅಲ್ಪಾವಧಿ ಸಾಲದ ದರವು ಈಗ ಶೇಕಡಾ 6ನ್ನು ದಾಟಿದಂತಾಗಿದೆ. ಕಳೆದ ಮೇ ತಿಂಗಳಲ್ಲಿ 40 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳ ಮತ್ತು ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳದ ನಂತರ ಇದು ಸತತ ಐದನೇ ದರ ಏರಿಕೆಯಾಗಿದೆ.

ಒಟ್ಟಾರೆಯಾಗಿ, ಈ ವರ್ಷದ ಮೇ ತಿಂಗಳಿನಿಂದ ಆರ್‌ಬಿಐ ರೆಪೊ ದರವನ್ನು ಶೇಕಡಾ 2.25 ರಷ್ಟು ಹೆಚ್ಚಿಸಿದೆ. ಇಂದು ಮುಂಬೈಯಲ್ಲಿ ನಡೆದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC) ದರ ಏರಿಕೆಯ ಪರವಾಗಿ ಬಹುಮತದ ಅಭಿಪ್ರಾಯ ಪಡೆದು ಈ ನಿರ್ಧಾರ ಕೈಗೊಂಡಿದೆ.

ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರ, ಅದರ ಮಾನದಂಡದ ದರವನ್ನು ನಿಗದಿಪಡಿಸುವಾಗ ಆರ್‌ಬಿಐ ಅಂಶಗಳು ಅಕ್ಟೋಬರ್‌ನಲ್ಲಿ ಶೇಕಡಾ 6.7 ರಷ್ಟಿತ್ತು. ಚಿಲ್ಲರೆ ಹಣದುಬ್ಬರವು ಈ ವರ್ಷದ ಜನವರಿಯಿಂದ ಶೇಕಡಾ 6 ಕ್ಕಿಂತ ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಪ್ರಕ್ಷೇಪಣವನ್ನು ಶೇಕಡಾ 6.7 ರಲ್ಲಿ ಉಳಿಸಿಕೊಂಡಿದ್ದಾರೆ.

ಆರ್‌ಬಿಐ ತನ್ನ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7ರ ಹಿಂದಿನ ಅಂದಾಜಿನಿಂದ ಶೇ.6.8ಕ್ಕೆ ತಗ್ಗಿಸಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ತನ್ನ ಕೊನೆಯ ದ್ವೈಮಾಸಿಕ ನೀತಿ ಪರಾಮರ್ಶೆಯಲ್ಲಿ, ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆಯ ಪ್ರಕ್ಷೇಪಣವನ್ನು ಹಿಂದಿನ ಶೇಕಡಾ 7.2 ರಿಂದ ಶೇಕಡಾ 7 ಕ್ಕೆ ಇಳಿಸಿತ್ತು.

ಕಳೆದ ಬಾರಿಯ ಹಣಕಾಸು ನೀತಿಯಲ್ಲಿ ಆರ್​ಬಿಐ ರೆಪೊ ದರವನ್ನು 50 ಮೂಲಾಂಶದಷ್ಟು ಹೆಚ್ಚಳ ಮಾಡಿತ್ತು. ಒಟ್ಟಾರೆಯಾಗಿ ಮೇ ತಿಂಗಳ ಬಳಿಕ ಆರ್​ಬಿಐ ರೆಪೊ ದರದಲ್ಲಿ 190 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಹಣದುಬ್ಬರವನ್ನು (Inflation) ನಿಯಂತ್ರಣಕ್ಕೆ ತರುವುದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಆರ್​ಬಿಐ, ರೆಪೊ ದರವನ್ನೂ ಸತತವಾಗಿ ಹೆಚ್ಚಿಸಿತ್ತು. ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳೂ ಸೇರಿದಂತೆ ವಿವಿಧ ಬ್ಯಾಂಕ್​ಗಳು ಸಾಲದ ಮತ್ತು ವಿವಿಧ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ.

ರೆಪೊ ದರ (Repo rate): ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ. ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.

ರಿವರ್ಸ್ ರೆಪೊ ದರ (Reverse repo rate): ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com