ಉಜ್ವಲ ಬಳಕೆದಾರರಿಗೆ 400 ರೂ, ಉಳಿದ ಗ್ರಾಹಕರಿಗೆ 200 ರೂಪಾಯಿ LPG ಸಬ್ಸಿಡಿ: ಕೇಂದ್ರ ಸರ್ಕಾರ

ಹಲವಾರು ವರ್ಷಗಳ ಹಿಂದೆ ಎಲ್‌ಪಿಜಿ ಅಥವಾ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಇದೀಗ ಅದೇ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿಯನ್ನು ಮರುಸ್ಥಾಪಿಸಲು ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಹಲವಾರು ವರ್ಷಗಳ ಹಿಂದೆ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಹಿಂತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಇದೀಗ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿಯನ್ನು ಕೊಡಲು ನಿರ್ಧರಿಸಿದೆ.

ಕೇಂದ್ರ ಸಚಿವ ಸಂಪುಟ ಪುನಃ ಸಬ್ಸಿಡಿಯನ್ನು ಕೊಡುವ ನಿರ್ಧಾರ ತೆಗೆದುಕೊಂಡಿದ್ದು, ದೇಶದ ಎಲ್ಲಾ 33 ಕೋಟಿ ಎಲ್‌ಪಿಜಿ ಗ್ರಾಹಕರಿಗೆ ಇದು ಅನ್ವಯಿಸುತ್ತದೆ. ಇದರಿಂದ ವಾರ್ಷಿಕ ಒಟ್ಟು ಸುಮಾರು 10,000 ಕೋಟಿ ರೂ. ಆರ್ಥಿಕ ಹೊರೆಯಾಗಲಿದ್ದು ಈ ವರ್ಷದ ಉಳಿಕೆ ಅವಧಿಗೆ 7,680 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಎಲ್ಲಾ ಗ್ರಾಹಕರಿಗೆ 200 ರೂಪಾಯಿಯಷ್ಟು ಇಳಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇಂದು ಕೇಂದ್ರ ಸಂಪುಟದ ನಿರ್ಧಾರಗಳನ್ನು ವಿವರಿಸಿದರು. ಸಬ್ಸಿಡಿಯನ್ನು ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗುತ್ತದೆಯೇ ಅಥವಾ ಸಿಲಿಂಡರ್ ಬೆಲೆಯಲ್ಲಿ ಫ್ಲಾಟ್ ರಿಯಾಯಿತಿಯನ್ನು ನೀಡಲಾಗುತ್ತದೆಯೇ ಎಂದು ಉತ್ತರಿಸಲು ಠಾಕೂರ್ ನಿರಾಕರಿಸಿದರು.

ಇದಲ್ಲದೆ, ಉಜ್ವಲ ಯೋಜನೆಯಡಿ ಇನ್ನೂ 75 ಲಕ್ಷ ಮಂದಿಗೆ ಉಚಿತ ಅನಿಲ ಸಂಪರ್ಕವನ್ನು ಕಲ್ಪಿಸಿಕೊಡಲಾಗುತ್ತದೆ. ಉಜ್ವಲ ಗ್ರಾಹಕರು ಪ್ರತಿ ಸಿಲಿಂಡರ್‌ಗೆ ಒಟ್ಟು 400 ರೂಪಾಯಿ ಸಬ್ಸಿಡಿ ಪಡೆಯಲಿದ್ದಾರೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಕೆಲ ವರ್ಷಗಳ ಹಿಂದೆ ಗ್ರಾಹಕರ ಬ್ಯಾಂಕ್ ಖಾತೆಗೆ LPG ಸಬ್ಸಿಡಿ ಹಣ ಪಾವತಿಸುವುದನ್ನು ನಿಲ್ಲಿಸಿತ್ತು.

ಕಳೆದ ವರ್ಷ ಮೇ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ ಬೆಲೆ ಸುಮಾರು 118 ಡಾಲರ್‌ ತಲುಪಿದ ನಂತರ ಕಚ್ಚಾ ತೈಲ ಬೆಲೆಗಳು ಗಣನೀಯವಾಗಿ ಇಳಿದಿದ್ದರೂ ಸಹ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಏಕೆ ಕಡಿತಗೊಳಿಸುತ್ತಿಲ್ಲ ಎಂದು ಕಳೆದ ತಿಂಗಳು ಸರ್ಕಾರವನ್ನು ಪ್ರಶ್ನಿಸಲಾಗಿತ್ತು. ಕಳೆದ ಏಳು ತಿಂಗಳಿನಿಂದ ಕಚ್ಚಾ ತೈಲ ಬೆಲೆಯು 60 ರಿಂದ 80 ಡಾಲರ್ ವ್ಯಾಪ್ತಿಯಲ್ಲಿದೆ.

ಸಬ್ಸಿಡಿಯನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಕಳೆದ ತಿಂಗಳು ರಾಜ್ಯಸಭೆಯಲ್ಲಿ ಹೇಳಿದರು.

ಆಗಸ್ಟ್ ಮೊದಲ ದಿನಾಂಕದಂದು ರಾಜಧಾನಿ ದೆಹಲಿಯಲ್ಲಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 1103 ರೂ. ಅದೇ ಸಮಯದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಮುಂಬೈನಲ್ಲಿ 1102.50, ಮತ್ತು ಕರ್ನಾಟಕದಲ್ಲಿ 1,105.50 ರೂ. ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನದಂದು ಎಲ್‌ಪಿಜಿ ಬೆಲೆಯನ್ನು ಬದಲಾಯಿಸುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com