ಕಳಪೆ ಆರ್ಥಿಕತೆ: ಮೈಕ್ರೋಸಾಫ್ಟ್ ನಲ್ಲಿ 10 ಸಾವಿರ ಉದ್ಯೋಗ ಕಡಿತ
ಕಳಪೆ ಆರ್ಥಿಕತೆ ಕಾರಣದಿಂದ ಟೆಕ್ ದೈತ್ಯ ಮೈಕ್ರೋಸಾಫ್ಟ್ ಮುಂದಿನ ಮಾರ್ಚ್ 31ರ ವೇಳೆಗೆ ಜಾಗತಿಕವಾಗಿ ಶೇ. 5 ರಷ್ಟು ಅಂದರೆ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಬುಧವಾರ ಘೋಷಿಸಿದೆ.
Published: 19th January 2023 12:35 AM | Last Updated: 19th January 2023 12:37 AM | A+A A-

ಮೈಕ್ರೋಸಾಫ್ಟ್
ಬೆಂಗಳೂರು: ಕಳಪೆ ಆರ್ಥಿಕತೆ ಕಾರಣದಿಂದ ಟೆಕ್ ದೈತ್ಯ ಮೈಕ್ರೋಸಾಫ್ಟ್ ಮುಂದಿನ ಮಾರ್ಚ್ 31ರ ವೇಳೆಗೆ ಜಾಗತಿಕವಾಗಿ ಶೇ. 5 ರಷ್ಟು ಅಂದರೆ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಬುಧವಾರ ಘೋಷಿಸಿದೆ.
ಈ ಉದ್ಯೋಗ ಕಡಿತ ಎಷ್ಟು ಭಾರತೀಯ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 1990 ರಲ್ಲಿ ಭಾರತದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ ಮೈಕ್ರೋಸಾಫ್ಟ್, ದೇಶದ 11 ನಗರಗಳಲ್ಲಿ 20,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಗ್ರಾಹಕರು ಈಗ ತಮ್ಮ ಡಿಜಿಟಲ್ ವೆಚ್ಚವನ್ನು ಕಡಿಮೆ ಮಾಡಲು ಬಯಸುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಕೆಲಸಗಳನ್ನು ಬಯಸುತ್ತಿದ್ದಾರೆ. ಜಗತ್ತಿನ ಕೆಲವು ಪ್ರದೇಶಗಳಲ್ಲಿ ಆರ್ಥಿಕ ಹಿಂಜರಿತ ಇದೆ. ಇನ್ನು ಕೆಲವು ಪ್ರದೇಶಗಳು ಆರ್ಥಿಕ ಹಿಂಜರಿತ ಎದುರಿಸುವ ನಿರೀಕ್ಷೆಯಲ್ಲಿರುವ ಕಾರಣ ಗ್ರಾಹಕರು ಎಚ್ಚರಿಕೆ ವಹಿಸಿದ್ದಾರೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಇದನ್ನು ಓದಿ: ಭಾರತದಲ್ಲಿ ಪ್ರತಿ ಐವರಲ್ಲಿ 4 ವೃತ್ತಿಪರರು ಹೊಸ ಉದ್ಯೋಗ ಹುಡುಕುತ್ತಿದ್ದಾರೆ: ವರದಿ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಉದ್ಯೋಗಿಗಳಿಗೆ ಬರೆದ ಟಿಪ್ಪಣಿಯಲ್ಲಿ, "ನಾವು ಗಮನಾರ್ಹ ಬದಲಾವಣೆಯ ಸಮಯದಲ್ಲಿ ಜೀವಿಸುತ್ತಿದ್ದೇವೆ... ಪ್ರಪಂಚದ ಕೆಲವು ಭಾಗಗಳು ಆರ್ಥಿಕ ಹಿಂಜರಿತ ಎದುರಿಸುತ್ತಿದ್ದು, ಪ್ರತಿಯೊಂದು ಉದ್ಯಮದಲ್ಲಿ ಮತ್ತು ಭೌಗೋಳಿಕತೆಯಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.
ಸಾಂಸ್ಥಿಕ ಪುನರ್‌ರಚನೆ ಭಾಗವಾಗಿ ಮೈಕ್ರೋಸಾಫ್ಟ್ ಕಳೆದ ಜುಲೈ ವೇಳೆಗೆ ಮೂರು ಭಾರಿ ಉದ್ಯೋಗ ಕಡಿತ ಪ್ರಕಟಿಸಿತ್ತು. ಆದರೂ ಕಂಪನಿಯ ಪರಿಸ್ಥಿತಿ ಸುಧಾರಣೆ ಆಗಿಲ್ಲ. ಹೀಗಾಗಿ ಮತ್ತೆ 10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ.