ಭಾರತದಲ್ಲಿ ಯಾವುದೇ ಹೊಸ ಹೂಡಿಕೆ ಒಪ್ಪಂದ ಮಾಡಿಕೊಂಡಿಲ್ಲ: ಬೊಮ್ಮಾಯಿ, ಕೆಸಿಆರ್ ಹೇಳಿಕೆ ತಳ್ಳಿಹಾಕಿದ ಫಾಕ್ಸ್‌ಕಾನ್

ತೈವಾನ್‌ನ ಟೆಕ್ ದೈತ್ಯ ಫಾಕ್ಸ್‌ಕಾನ್, ತನ್ನ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿರುವುದನ್ನು ಶನಿವಾರ ದೃಢಪಡಿಸಿದೆ. ಆದರೆ ದೇಶದಲ್ಲಿ ಹೊಸ ಹೂಡಿಕೆಗೆ ಸಂಬಂಧಿಸಿದಂತೆ "ಯಾವುದೇ ಖಚಿತ, ನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡಿಲ್ಲ"...
ಬೊಮ್ಮಾಯಿ, ಕೆಸಿಆರ್
ಬೊಮ್ಮಾಯಿ, ಕೆಸಿಆರ್

ತೈಪೆ: ತೈವಾನ್‌ನ ಟೆಕ್ ದೈತ್ಯ ಫಾಕ್ಸ್‌ಕಾನ್, ತನ್ನ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿರುವುದನ್ನು ಶನಿವಾರ ದೃಢಪಡಿಸಿದೆ. ಆದರೆ ದೇಶದಲ್ಲಿ ಹೊಸ ಹೂಡಿಕೆಗೆ ಸಂಬಂಧಿಸಿದಂತೆ "ಯಾವುದೇ ಖಚಿತ, ನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡಿಲ್ಲ" ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ತಯಾರಿಕಾ ಕಂಪನಿ ಹಾನ್‌ಹಾಯ್‌ ಟೆಕ್ನಾಲಜಿ ಗ್ರೂಪ್‌(ಫಾಕ್ಸ್‌ಕಾನ್‌) ಶೀಘ್ರದಲ್ಲೇ ರಾಜ್ಯದಲ್ಲಿ ಆ್ಯಪಲ್‌ ಐಫೋನ್‌ ಉತ್ಪಾದನಾ ಘಟಕ ಸ್ಥಾಪಿಸಲಿದ್ದು, ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ ಬೆನ್ನಲ್ಲೇ ಫಾಕ್ಸ್‌ಕಾನ್ ಈ ಹೇಳಿಕೆ ನೀಡಿದೆ.

ಫೆಬ್ರುವರಿ 27 ರಿಂದ ಮಾರ್ಚ್ 4 ರವರೆಗೆ ತನ್ನ ಅಧ್ಯಕ್ಷ ಮತ್ತು ಸಿಇಒ ಯಂಗ್ ಲಿಯು ಭಾರತಕ್ಕೆ ಭೇಟಿ ನೀಡಿದಾಗ ಯಾವುದೇ ಖಚಿತ ಒಪ್ಪಂದಗಳನ್ನು ಮಾಡಿಕೊಂಡಿಲ್ಲ ಎಂದು ಫಾಕ್ಸ್‌ಕಾನ್ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

"ಈ ಪ್ರವಾಸದ ಸಮಯದಲ್ಲಿ ಹೊಸ ಹೂಡಿಕೆಗಳಿಗೆ ಸಂಬಂಧಿಸಿದಂತೆ ಫಾಕ್ಸ್‌ಕಾನ್ ಖಚಿತ ಮತ್ತು ನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡಿಲ್ಲ" ಎಂದು ಪ್ರಕಟಣೆ ತಿಳಿಸಿದೆ.

"ಮಾತುಕತೆಗಳು ಮತ್ತು ಆಂತರಿಕ ಪರಿಶೀಲನೆಗಳು ನಡೆಯುತ್ತಿವೆ. ಮಾಧ್ಯಮಗಳಲ್ಲಿ ಚರ್ಚಿಸಲಾದ ಹಣಕಾಸು ಹೂಡಿಕೆ ಮೊತ್ತಗಳು ಫಾಕ್ಸ್‌ಕಾನ್ ಬಿಡುಗಡೆ ಮಾಡಿದ ಮಾಹಿತಿ ಅಲ್ಲ" ಕಂಪನಿ ಸ್ಪಷ್ಟಪಡಿಸಿದೆ.

ಫಾಕ್ಸ್‌ಕಾನ್ ಕರ್ನಾಟಕದ ತನ್ನ ಹೊಸ ಘಟಕದಲ್ಲಿ700 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿತ್ತು.

ಇನ್ನು ನೆರೆಯ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಕಚೇರಿ ಸಹ, ಫಾಕ್ಸ್‌ಕಾನ್  "ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು" ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಟ್ವೀಟ್ ಮಾಡಿತ್ತು.

ಪ್ರಸ್ತುತ ವರದಿಯಾಗುತ್ತಿರುವ ಉದ್ಯೋಗ ಅಂಕಿಅಂಶಗಳು ಕಂಪನಿಯೊಂದಿಗೆ "ನೇರ ಉದ್ಯೋಗಗಳನ್ನು ಪ್ರತಿಬಿಂಬಿಸುವುದಿಲ್ಲ" ಎಂದು ಫಾಕ್ಸ್‌ಕಾನ್ ಹೇಳಿದೆ.

"ಈ ವಾರದ ನನ್ನ ಭಾರತ ಪ್ರವಾಸವು ಪಾಲುದಾರಿಕೆಗಳನ್ನು ಗಾಢವಾಗಿಸುವ ಫಾಕ್ಸ್‌ಕಾನ್‌ನ ಪ್ರಯತ್ನಗಳನ್ನು ಬೆಂಬಲಿಸಿದೆ ... ಮತ್ತು ಅರೆವಾಹಕ ಅಭಿವೃದ್ಧಿ ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ಹೊಸ ಕ್ಷೇತ್ರಗಳಲ್ಲಿ ಸಹಕಾರವನ್ನು ಹುಡುಕುತ್ತಿದೆ" ಎಂದು ಲಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com