
ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ಸತತ 11 ನೇ ಬಾರಿಗೆ ನೀತಿ ದರವನ್ನು ಬದಲಿಸದೆ ಶೇಕಡಾ 6.5ರಷ್ಟು ಯಥಾಸ್ಥಿತಿ ಕಾಯ್ದಿರಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯಾದ ಶೇಕಡಾ 7.2 ರ ಬದಲು ಶೇಕಡಾ 6.6ಕ್ಕೆ ತಗ್ಗಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯು 7 ತ್ರೈಮಾಸಿಕ ಕನಿಷ್ಠ 5.4 ಶೇಕಡಾಕ್ಕೆ ಕುಸಿದಿದ್ದರೂ ಬಡ್ಡಿದರದ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ, ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಶೇಕಡಾ 6.5ದಲ್ಲಿ ಇರಿಸಲು ನಿರ್ಧರಿಸಿದೆ ಮತ್ತು ನೀತಿ ನಿಲುವನ್ನು ತಟಸ್ಥವಾಗಿ ಇರಿಸಿದೆ ಎಂದು ಹೇಳಿದರು.
ಆರ್ ಬಿಐ, ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಹಿಂದಿನ ಶೇಕಡಾ 7.2ರಿಂದ ಶೇಕಡಾ 6.6 ಕ್ಕೆ ತೀವ್ರವಾಗಿ ಕಡಿತಗೊಳಿಸಿತು, ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರದ ಗುರಿಯನ್ನು ಶೇಕಡಾ 4.5ರಿಂದ ಶೇಕಡಾ 4.8 ಕ್ಕೆ ಹೆಚ್ಚಿಸಿದೆ.
ಆರ್‌ಬಿಐ ಗವರ್ನರ್‌ರ ಪ್ರಮುಖ ಘೋಷಣೆಗಳು:
ಆರ್‌ಬಿಐ 'ತಟಸ್ಥ' ಹಣಕಾಸು ನೀತಿಯ ನಿಲುವನ್ನು ಮುಂದುವರಿಸಲಿದೆ
ಸತತವಾಗಿ 11 ನೇ ಬಾರಿಗೆ ರೆಪೊ ದರ ಶೇಕಡಾ 6.5 ಬಡ್ಡಿದರ ಮುಂದುವರಿಕೆ
ಜುಲೈ-ಸೆಪ್ಟೆಂಬರ್‌ಗೆ 5.4% ಜಿಡಿಪಿ ಬೆಳವಣಿಗೆ, ನಿರೀಕ್ಷೆಗಿಂತ ಕಡಿಮೆ
ಆರ್ಥಿಕ ವರ್ಷ 2025ರಲ್ಲಿ, ಚಿಲ್ಲರೆ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 4.8 ಕ್ಕೆ ಹೆಚ್ಚಿಸಲಾಗಿದೆ, ಹಿಂದಿನ ಮುನ್ಸೂಚನೆ ಶೇಕಡಾ 4.5ಕ್ಕಿಂತ ಹೆಚ್ಚಾಗಿದೆ
ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಶೇಕಡಾ 7.2 ರಿಂದ ಶೇಕಡಾ 6.6 ಕ್ಕೆ ಪರಿಷ್ಕರಿಸಲಾಗಿದೆ
ನಗದು ಮೀಸಲು ಅನುಪಾತವನ್ನು 4.5% ರಿಂದ 4% ಕ್ಕೆ ಇಳಿಸಲಾಗಿದೆ, ಬ್ಯಾಂಕ್‌ಗಳಿಗೆ 1.16 ಲಕ್ಷ ಕೋಟಿ ಲಿಕ್ವಿಡಿಟಿ ಲಭ್ಯವಾಗುತ್ತದೆ.
ಅಕ್ಟೋಬರ್‌ನಲ್ಲಿ ಕಳೆದ ಹಣಕಾಸು ನೀತಿಯಿಂದ ಸಮೀಪಾವಧಿಯ ಹಣದುಬ್ಬರ ಬೆಳವಣಿಗೆಯ ದೃಷ್ಟಿಕೋನವು ಸ್ವಲ್ಪಮಟ್ಟಿಗೆ ಪ್ರತಿಕೂಲವಾಗಿದೆ.
ರೆಪೊ ದರ (Repo rate): ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.
ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಿವರ್ಸ್ ರೆಪೊ ದರ (Reverse repo rate): ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.
Advertisement