
ನವದೆಹಲಿ: ಒಂದು ಕಾಲದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದ ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅನುತ್ಪಾದಕ ಆಸ್ತಿ (ಎನ್ ಪಿಎ) ಸಮಸ್ಯೆಯಿಂದ ಬ್ಯಾಂಕಿಂಗ್ ಕ್ಷೇತ್ರ ಸುಧಾರಿಸಿಕೊಂಡಿದ್ದಕ್ಕೆ ನರೇಂದ್ರ ಮೋದಿ ಸರ್ಕಾರಕ್ಕೆ ಕ್ರೆಡಿಟ್ ಕೊಟ್ಟಿದ್ದಾರೆ.
ದಿ ಪ್ರಿಂಟ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಘುರಾಮ್ ರಾಜನ್, NPA ಆ ಪರಿಪ್ರಮಾಣದಲ್ಲಿ ಹೆಚ್ಚಳವಾಗಲು ಯುಪಿಎ ಸರ್ಕಾರದ ಭ್ರಷ್ಟಾಚಾರವೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಾನು ಅಂದಿನ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ನಮ್ಮ ಬಳಿ ಇಷ್ಟು ಕೆಟ್ಟ ಸಾಲ ಇದೆ. ಅದರಿಂದ ಹೊರಬರಬೇಕು. ಅದಾಗದೇ ಇದ್ದರೆ, ವ್ಯವಸ್ಥೆ ಸರಿ ಹೋಗುವುದಿಲ್ಲ ಅಥವಾ ಸಾಲ ನೀಡಲು ಸಾಧ್ಯವಾಗುವುದಿಲ್ಲ ಎಂದು ಮನರವಿಕೆ ಮಾಡಿಕೊಟ್ಟಿದ್ದೆ. ನನ್ನ ಮಾತು ಆಲಿಸಿದ ಅರುಣ್ ಜೇಟ್ಲಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದರು, ಮುನ್ನುಗ್ಗಿ ಎಂದು ಹೇಳಿದ್ದರು. ನಂತರ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಕ್ರಿಯೆ, ರೈಟ್ ಆಫ್ ಮಾಡುವ ಪ್ರಕ್ರಿಯೆ ಆರಂಭವಾಯಿತು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಯುಪಿಎ ಅವಧಿಯಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ಅದಾಗಲೇ ಆರಂಭವಾಗಿದ್ದ ಹಲವು ಯೋಜನೆಗಳಿಗೆ ಸಮಸ್ಯೆ ಎದುರಾಗಿತ್ತು. ಹೆಚ್ಚುವರಿಯಾಗಿ ಭಾರತ ಭ್ರಷ್ಟಾಚಾರ, ಹಗರಣಗಳಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು, ಇದರಿಂದಾಗಿ ಅನುಮತಿಗಳು ದೊರೆಯುವುದು ಕಷ್ಟವಾಗತೊಡಗಿತ್ತು. ಯೋಜನೆಗಳಿಗೆ ಭೂಮಿ ಲಭ್ಯವಾಗುತ್ತಿರಲಿಲ್ಲ. ಪರಿಸರ ಅನುಮತಿ ಸಿಗುತ್ತಿರಲಿಲ್ಲ. ಇದರಿಂದಾಗಿ ಎನ್ ಪಿಎ ಗಳು ಬೆಳೆಯತೊಡಗಿತು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
Advertisement