CEO ಆಗಿ ಮುಂದುವರಿಕೆ; ನನ್ನ ವಜಾ ವದಂತಿಗಳು ಉತ್ಪ್ರೇಕ್ಷಿತ, ಅಸಮರ್ಪಕ - ಬೈಜು ರವೀಂದ್ರನ್
ನವದೆಹಲಿ: ಸಂಕಷ್ಟದಲ್ಲಿರುವ ಎಜುಟೆಕ್ ಸಂಸ್ಥೆ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರು, ತಮ್ಮ ಪದಚ್ಯುತಿಗೆ ಶುಕ್ರವಾರ ಸಂಸ್ಥೆಯ ಷೇರುದಾರರು ಮತ್ತು ಹೂಡಿಕೆದಾರರು ತೆಗೆದುಕೊಂಡ ಸರ್ವಾನುಮತದ ನಿರ್ಣಯ ಒಂದು "ಪ್ರಹಸನ" ಎಂದಿದ್ದು, ತಾವು ಸಿಇಒ ಆಗಿ ಮುಂದುವರಿಯುತ್ತಿರುವುದಾಗಿ ಮತ್ತು ಆಡಳಿತ ಬದಲಾಗಿಲ್ಲ ಎಂದು ಶನಿವಾರ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ.
ಒಂದು ಕಾಲದಲ್ಲಿ ಭಾರತದ ಅತ್ಯಂತ ಜನಪ್ರಿಯ ಟೆಕ್ ಸ್ಟಾರ್ಟ್‌ಅಪ್‌ನಲ್ಲಿ "ದುರಾಡಳಿತ ಮತ್ತು ವೈಫಲ್ಯಗಳ" ಆರೋಪದ ಮೇಲೆ ಸಂಸ್ಥಾಪಕ-ಸಿಇಒ ರವೀಂದ್ರನ್ ಮತ್ತು ಅವರ ಕುಟುಂಬವನ್ನು ಆಡಳಿತ ಮಂಡಳಿಯಿಂದ ತೆಗೆದುಹಾಕಲು ಶುಕ್ರವಾರ ಬೈಜೂಸ್ ಷೇರುದಾರರು ಮತ್ತು ಹೂಡಿಕೆದಾರರು ಸರ್ವಾನುಮತದ ನಿರ್ಣಯ ತೆಗೆದುಕೊಂಡಿದ್ದರು.
ಇಂದು ಬೈಜು ರವೀಂದ್ರನ್ ಅವರು ಉದ್ಯೋಗಿಗಳಿಗೆ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದ್ದು, ಸಂಸ್ಥಾಪಕರ ಅನುಪಸ್ಥಿತಿಯಲ್ಲಿ ನಡೆದ ಮತದಾನವನ್ನು ಅಮಾನ್ಯ ಮತ್ತು ನಿಷ್ಪರಿಣಾಮಕಾರಿ ಎಂದು ಹೇಳಿದ್ದಾರೆ.
ಶುಕ್ರವಾರದ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ(ಇಜಿಎಂ) ಬಹಳಷ್ಟು ಅಗತ್ಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ರವೀಂದ್ರನ್ ಅವರು ಶನಿವಾರ ನೌಕರರಿಗೆ ಬರೆದ ಟಿಪ್ಪಣಿಯಲ್ಲಿ ಆರೋಪಿಸಿದ್ದಾರೆ.
"ಇದರರ್ಥ ಆ ಸಭೆಯಲ್ಲಿ ನಿರ್ಧರಿಸಿದ ಯಾವುದನ್ನೂ ಲೆಕ್ಕಿಸುವುದಿಲ್ಲ, ಏಕೆಂದರೆ ಅದು ಸ್ಥಾಪಿತ ನಿಯಮಗಳಿಗೆ ಬದ್ಧವಾಗಿಲ್ಲ ... " ಎಂದು ಅವರು ಬರೆದಿದ್ದಾರೆ.
"ನಮ್ಮ ಕಂಪನಿಯ ಸಿಇಒ ಆಗಿ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ಮಾಧ್ಯಮದಲ್ಲಿ ಓದಿರುವುದಕ್ಕೆ ವ್ಯತಿರಿಕ್ತವಾಗಿ, ನಾನು ಸಿಇಒ ಆಗಿ ಮುಂದುವರಿಯುತ್ತಿದ್ದೇನೆ. ಆಡಳಿತ ಬದಲಾಗದೆ ಹಾಗೆ ಉಳಿದಿದೆ ಮತ್ತು ಮಂಡಳಿಯು ಒಂದೇ ಆಗಿರುತ್ತದೆ" ಮತ್ತು BYJU'S ವ್ಯವಹಾರ "ಎಂದಿನಂತೆ ನಡೆಯಲಿದೆ" ಎಂದು ರವೀಂದ್ರನ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ