
ಮುಂಬೈ: ಷೇರು ಮಾರುಕಟ್ಟೆ ಬುಧವಾರ ವಹಿವಾಟು ಆರಂಭದ ವೇಳೆ ಸಾರ್ವಕಾಲಿಕ ಗರಿಷ್ಠ ದಾಖಲೆ ಮಾಡಿದೆ, ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಬುಧವಾರ ಮೊದಲ ಬಾರಿಗೆ 80,000 ಗಡಿ ದಾಟಿದೆ. ವಹಿವಾಟಿನ ಮೊದಲ ಮೂವತ್ತು ನಿಮಿಷಗಳ ಅವಧಿಯಲ್ಲಿ 30-ಷೇರು ಸೂಚ್ಯಂಕ ಗರಿಷ್ಠ 80,057.90 ನ್ನು ತಲುಪಿತು. ನಿಫ್ಟಿ 50 ಸೂಚ್ಯಂಕವು 24,294.60 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಕಳೆದ ವರ್ಷ ಡಿಸೆಂಬರ್ 11, 2023 ರಂದು ಸೆನ್ಸೆಕ್ಸ್ 70,000 ಅಂಕಗಳನ್ನು ಮೊದಲ ಬಾರಿಗೆ ದಾಟಿತ್ತು. ಏಳು ತಿಂಗಳೊಳಗೆ ಮತ್ತೆ 10 ಸಾವಿರ ಗಡಿಯನ್ನು ದಾಟಿ 80 ಸಾವಿರಕ್ಕೆ ಏರಿಕೆಯಾಗಿದೆ. 60,000 ರಿಂದ 70,000 ರವರೆಗಿನ ಷೇರು ಮಾರುಕಟ್ಟೆ ಸೂಚ್ಯಂಕದ ಪಯಣವು ದಾಖಲೆಯಾಗಿದೆ.
ಷೇರು ಮಾರುಕಟ್ಟೆಯು ಹಿಂದಿನ 10,000 ಅಂಕಗಳನ್ನು ಸೇರಿಸಲು 1.5 ವರ್ಷಗಳನ್ನು ತೆಗೆದುಕೊಂಡಿತು. ಸೆಪ್ಟೆಂಬರ್ 24, 2021 ರಂದು ಸೆನ್ಸೆಕ್ಸ್ 60,000ರ ಗಡಿ ದಾಟಿತ್ತು.
ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿಯ ಸಾರ್ವತ್ರಿಕ ಚುನಾವಣಾ ಫಲಿತಾಂಶದ ದಿನವಾದ ಜೂನ್ 4 ರಂದು ಷೇರು ಸಂವೇದಿ ಸೂಚ್ಯಂಕ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. 4,390 ಪಾಯಿಂಟ್‌ಗಳ ಅಥವಾ ಶೇಕಡಾ 5.744ರಷ್ಟು ನಷ್ಟದೊಂದಿಗೆ 72,079.05ರಲ್ಲಿ ಕೊನೆಗೊಂಡಿತ್ತು.
Advertisement