
ಬೆಂಗಳೂರು: ಟ್ವಿಟರ್ ಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದಿದ್ದ ಭಾರತೀಯ ಸಾಮಾಜಿಕ ಜಾಲತಾಣ ಕೂ ಶೀಘ್ರವೇ ಸ್ಥಗಿತಗೊಳ್ಳಲಿದೆ.
ಕೂ ಮಾರಾಟಕ್ಕೆ Dailyhunt ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣವನ್ನು ಸ್ಥಗಿತಗೊಳಿಸಲಾಗುತ್ತಿದೆ. ಕೂ ಗೆ ಟೈಗರ್ ಗ್ಲೋಬಲ್, ಆಕ್ಸಿಲ್ (Accel) ನಂತಹ ಪ್ರಮುಖ ಹೂಡಿಕೆದಾರರಿಂದ ಹೂಡಿಕೆಯ ನೆರವು ಲಭಿಸಿತ್ತಾದರೂ, ಬಳಕೆದಾರರ ಮೂಲ ಮತ್ತು ಕಳೆದ ವರ್ಷದಲ್ಲಿ ಆದಾಯವನ್ನು ಗಳಿಸುವುದರಲ್ಲಿ ಕೂ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು.
5 ಬಿಲಿಯನ್ ಡಾಲರ್ ಮೌಲ್ಯಕ್ಕೆ ಜಾಲತಾಣ ಸಂಸ್ಥೆಯನ್ನು ಮಾರಾಟ ಮಾಡುವ ಬಗ್ಗೆ ಕೂ ಡೈಲಿ ಹಂಟ್ ಜೊತೆ ಮಾತುಕತೆ ನಡೆಸುತ್ತಿತ್ತು. ಆದರೆ ಮಾತುಕತೆ ವಿಫಲವಾಯಿತು ಎಂದು ಕೂ ಫೌಂಡರ್ ಗಳು ಹೇಳಿದ್ದಾರೆ.
"ನಾವು ಅನೇಕ ದೊಡ್ಡ ಇಂಟರ್ನೆಟ್ ಕಂಪನಿಗಳು, ಸಂಘಟಿತ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಅನ್ವೇಷಿಸಿದ್ದೇವೆ ಆದರೆ ಈ ಮಾತುಕತೆಗಳು ನಾವು ಬಯಸಿದ ಫಲಿತಾಂಶವನ್ನು ನೀಡಲಿಲ್ಲ" ಎಂದು Koo ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಬಿಡವಟ್ಕಾ ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬುಧವಾರ ಬರೆದಿದ್ದಾರೆ.
ಸ್ಥಳೀಯ ಭಾಷೆಗಳಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಬಹುದಾದ X ತರಹದ ವೇದಿಕೆಯನ್ನು ನೀಡುವ ಮೂಲಕ ಬಳಕೆದಾರರನ್ನು ಗೆಲ್ಲಲು ಕೂ ಪ್ರಯತ್ನಿಸಿತ್ತು. ಸ್ಟಾರ್ಟಪ್ ತನ್ನ ನಾಮಸೂಚಕ ಅಪ್ಲಿಕೇಶನ್ ನ್ನು ಬ್ರೆಜಿಲ್‌ಗೆ ವಿಸ್ತರಿಸಿದೆ.
Advertisement