
ನವದೆಹಲಿ: ಬಾಕಿ ಉಳಿದಿರುವ ನೇರ ತೆರಿಗೆ ಮೇಲ್ಮನವಿಯ ಇತ್ಯರ್ಥಕ್ಕಾಗಿ ಬಜೆಟ್‌ನಲ್ಲಿ ಘೋಷಿಸಲಾದ 'ವಿವಾದ್ ಸೇ ವಿಶ್ವಾಸ್' ಯೋಜನೆಯನ್ನು ಈ ವರ್ಷ ಪ್ರಾರಂಭಿಸಲಾಗುವುದು. ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು CBDT ಅಧ್ಯಕ್ಷ ರವಿ ಅಗರವಾಲ್ ಬುಧವಾರ ಹೇಳಿದ್ದಾರೆ.
ಬಜೆಟ್ ನಂತರದ ಸಂದರ್ಶನದಲ್ಲಿ ಪಿಟಿಐಗೆ ಮಾತನಾಡಿದ ಅವರು, ದೇಶದ ವಿವಿಧ ನ್ಯಾಯಾಲಯಗಳಲ್ಲಿ ನೇರ ತೆರಿಗೆ ಸಂಬಂಧಿತ ಸಾಕಷ್ಟು ಮೇಲ್ಮನೆಗಳು ದಾಖಲಾಗಿವೆ. ತೆರಿಗೆದಾರರು ಈ ಹೊಸ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ, ಹೀಗೆ ಉಳಿದ ಹಲವು ಮೇಲ್ಮನವಿಗಳು ಇತ್ಯರ್ಥವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ನೇರ ತೆರಿಗೆ ಅಥವಾ ಆದಾಯ ತೆರಿಗೆ ವರ್ಗದ ಅಡಿಯ ಪ್ರಕರಣಗಳಿಗೆ 2020ರಲ್ಲಿ ಮೊದಲ ಬಾರಿಗೆ 'ವಿವಾದ್ ಸೇ ವಿಶ್ವಾಸ್' ಯೋಜನೆಯನ್ನು ಸರ್ಕಾರ ಪರಿಚಯಿಸಿತು. ಹಲವು ಲಕ್ಷ ತೆರಿಗೆದಾರರು ಈ ಯೋಜನೆಯ ಲಾಭ ಪಡೆದಿದ್ದರಿಂದ ಸುಮಾರು 75,000 ಕೋಟಿ ಆದಾಯ ಬಂದಿದೆ. ಡಿಸೆಂಬರ್ 31 ರೊಳಗೆ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಶೀಘ್ರದಲ್ಲಿ ಈ ಕುರಿತು ಅಧಿಸೂಚನೆ ಬಿಡುಗಡೆ ಮಾಡಲಾಗುವುದು. ಅದರೊಂದಿಗೆ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು ಎಂದು ಅಗರ್ ವಾಲ್ ಹೇಳಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ "ಬಾಕಿ ಉಳಿದಿರುವ ಮೇಲ್ಮನವಿಗಳ ಇತ್ಯರ್ಥಕ್ಕಾಗಿ" ಯೋಜನೆಯನ್ನು ಪರಿಚಯಿಸಲು ಪ್ರಸ್ತಾಪಿಸಿದ್ದಾರೆ." ಇದನ್ನು ನಿರ್ದಿಷ್ಟ ದಿನಾಂಕದಿಂದ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಯೋಜನೆಗೆ ಕೊನೆಯ ದಿನಾಂಕವನ್ನು ಸಹ ಸೂಚಿಸಲು ಪ್ರಸ್ತಾಪಿಸಲಾಗಿದೆ" ಎಂದು ಸಚಿವರು ಮಂಗಳವಾರ ಹೇಳಿದ್ದರು.
Advertisement