
ಡೆಹ್ರಾಡೂನ್: ವಿಮಾನ ವಿಳಂಬವಾದರೆ ಯೋಜನೆಗಳಲ್ಲಿ ವ್ಯತ್ಯಯ ಉಂಟಾಗಿ ಜನತೆ ಅಸಮಾಧಾನಗೊಳ್ಳುವುದು ಸಹಜ ಆದರೆ ಡೆಹ್ರಾಡೂನ್ ನ ಉದ್ಯಮಿಯೊಬ್ಬರು ಎಮಿರೇಟ್ಸ್ ವಿಮಾನ ವಿಳಂಬವಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದಿರುವ ಪೋಸ್ಟ್ ಈಗ ವೈರಲ್ ಆಗತೊಡಗಿದೆ.
ನಾನು 16 ವರ್ಷಗಳಿಂದ ಬೇರೆಲ್ಲಾ ವಿಮಾನಗಳನ್ನು ಬಿಟ್ಟು ಎಮಿರೇಟ್ಸ್ ಗೆ ಆದ್ಯತೆ ನೀಡುತ್ತಿದ್ದೇನೆ ಎಂದು ಅರವಿಂದ್ ದತ್ತಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿರುವುದು ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ಗ್ರಾಹಕ ಕೇಂದ್ರಿತ ಗಮನವನ್ನು ಅರವಿಂದ್ ದತ್ತಾ ಉಲ್ಲೇಖಿಸಿದ್ದಾರೆ. ಜೂ.10 ರಂದು ಅರವಿಂದ್ ದತ್ತಾ ಪ್ರಯಾಣಿಸಬೇಕಿದ್ದ ವಿಮಾನ ತಾಂತ್ರಿಕ ದೋಷಗಳ ಕಾರಣ ದೆಹಲಿಯಲ್ಲಿ 2 ಗಂಟೆಗಳ ಕಾಲ ವಿಳಂಬವಾಗಿತ್ತು. ಅರವಿಂದ್ ದತ್ತಾ ಜೊತೆ ಇನ್ನೂ 80 ಮಂದಿ ಈ ವಿಳಂಬದಿಂದಾಗಿ ತಮ್ಮ ಮುಂದಿನ ಸಂಪರ್ಕ ವಿಮಾನಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದೇ ಉಳಿದರು.
ಆದರೆ ದುಬೈ ಏರ್ ಪೋರ್ಟ್ ನಲ್ಲಿ ಎಮಿರೇಟ್ಸ್ ಪ್ರಯಾಣಿಕರಿಗೆ ಇನ್ನು ಹೆಚ್ಚಿನ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿತ್ತು. ಎಮಿರೇಟ್ಸ್ ಸಿಬ್ಬಂದಿ ಹೊಟೆಲ್ ಬುಕ್ಕಿಂಗ್ ಜೊತೆಗೆ ಬೋರ್ಡಿಂಗ್ ಪಾಸ್‌ಗಳೊಂದಿಗೆ ಸಿದ್ಧವಿದ್ದರು. "ಅವರು ಹೋಟೆಲ್‌ಗೆ ಹೋಗಲು ವೀಸಾ ನೀಡಿದರು. ನಾಳೆ ಬೆಳಿಗ್ಗೆ ಅವರು ನಮ್ಮನ್ನು ಹೋಟೆಲ್‌ನಿಂದ ಕರೆದುಕೊಂಡು ಹೋಗುತ್ತಾರೆ. ಈ ಸೇವಾ ಮಾನದಂಡವು Emirates ನ್ನು ಉಳಿದ ವಿಮಾನ ಸಂಸ್ಥೆಗಳಿಗಿಂತಲೂ ವಿಶೇಷವಾಗಿಸುತ್ತದೆ. ಎಮಿರೇಟ್ಸ್ ಸಿಬ್ಬಂದಿ ಗ್ರಾಹಕರನ್ನು ಸದಾ ಸಂತೋಷಪಡಿಸುತ್ತಿರುತ್ತಾರೆ” ಎಂದು ಅರವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅರವಿಂದ್ ಅವರ ಪೋಸ್ಟ್, 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದ್ದು, ಕಾಮೆಂಟ್‌ಗಳ ವಿಭಾಗದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಹಲವು ನೆಟ್ಟಿಗರು ಅರವಿಂದ್ ದತ್ತಾ ಅವರ ಪೋಸ್ಟ್ ಗೆ ಸಹಮತ ವ್ಯಕ್ತಪಡಿಸಿದ್ದು, ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಅರವಿಂದ್ ದತ್ತಾ ಮಾರಿಗೋಲ್ಡ್ ವೆಲ್ತ್ ನ ಸ್ಥಾಪಕ ಹಾಗೂ ಸಿಇಒ ಆಗಿದ್ದಾರೆ.
Advertisement