
ನವದೆಹಲಿ: ಕಳೆದ ವರ್ಷದ ಡಿಸೆಂಬರ್‌ನಿಂದ ಚಿಲ್ಲರೆ ಹಣದುಬ್ಬರ ಕಡಿಮೆಯಾಗುತ್ತಿದ್ದು, ಮೇ ತಿಂಗಳಲ್ಲಿ ಒಂದು ವರ್ಷದ ಕನಿಷ್ಠ ಮಟ್ಟವಾದ ಶೇ.4.75ಕ್ಕೆ ತಗ್ಗಿದೆ.
ಕೆಲವು ಆಹಾರ ವಸ್ತುಗಳ ಬೆಲೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿರುವುದರಿಂದ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ ಎಂದು ಬುಧವಾರ ಬಿಡುಗಡೆಯಾದ ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಗ್ರಾಹಕ ಬೆಲೆ ಸೂಚ್ಯಂಕ(CPI) ಆಧಾರಿತ ಚಿಲ್ಲರೆ ಹಣದುಬ್ಬರವು ಏಪ್ರಿಲ್ 2024 ರಲ್ಲಿ ಶೇಕಡಾ 4.83 ಇತ್ತು. ಮೇ 2023 ರಲ್ಲಿ ಶೇಕಡಾ 4.31 ಇತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ(ಎನ್‌ಎಸ್‌ಒ)ಯ ವರದಿ ತಿಳಿಸಿದೆ.
ಅಂಕಿಅಂಶಗಳ ಪ್ರಕಾರ ಆಹಾರ ಹಣದುಬ್ಬರವು ಕಳೆದ ಏಪ್ರಿಲ್‌ನಲ್ಲಿ ಶೇಕಡಾ 8.70 ರಷ್ಟು ಇತ್ತು. ಅದು ಮೇ ತಿಂಗಳಲ್ಲಿ ಶೇಕಡಾ 8.69 ಕ್ಕೆ ಇಳಿಕೆಯಾಗಿದೆ. ಆಹಾರ ಹಣದುಬ್ಬರ ಕಳೆದ ಫೆಬ್ರವರಿಯಿಂದ ಇಳಿಕೆಯ ಪಥದಲ್ಲಿಯೇ ಸಾಗುತ್ತಿದೆ. ಫೆಬ್ರವರಿಯಲ್ಲಿ ಶೇಕಡಾ 5.1 ರಷ್ಟು ದಾಖಲಾಗಿತ್ತು.
ಹಣದುಬ್ಬರವು ಶೇ. 4 ರ ಮಿತಿಯಲ್ಲಿಯೇ ಕಾಯ್ದುಕೊಳ್ಳುವುದು ಭಾರತೀಯ ರಿಸರ್ವ್ ಬ್ಯಾಂಕ್ ನ ಗುರಿಯಾಗಿದೆ. ಇತ್ತೀಚಿಗೆ ನಡೆದ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ. 4.5 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
Advertisement