ಮುಂಬೈ: ಯುಪಿಐ ವಹಿವಾಟುಗಳ ಬಗ್ಗೆ ಅಚ್ಚರಿಯ ರೀತಿಯ ಆನ್ ಲೈನ್ ಸಮೀಕ್ಷೆಯೊಂದು ಬಹಿರಂಗಗೊಂಡಿದೆ. ಲೋಕಲ್ ಸರ್ಕಲ್ಸ್ ಎಂಬ ಸಂಸ್ಥೆ ಈ ಆನ್ ಲೈನ್ ಸಮೀಕ್ಷೆ ನಡೆಸಿದೆ. ಸಮೀಕ್ಷೆಗೆ ಒಳಪಟ್ಟ ಗಣನೀಯ ಪ್ರಮಾಣದ ಮಂದಿಗೆ ತಮ್ಮ ಯುಪಿಐ ಪಾವತಿಗಳ ಮೇಲೆ ಕಳೆದ ಒಂದು ವರ್ಷದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ವಹಿವಾಟು ಶುಲ್ಕ ವಿಧಿಸಲಾಗಿರುವುದು ಬೆಳಕಿಗೆ ಬಂದಿದೆ.
364 ಜಿಲ್ಲೆಗಳಲ್ಲಿನ 34,000 ಮಂದಿಯನ್ನು ಸಮೀಕ್ಷೆಯಲ್ಲಿ ಮಾತನಾಡಿಸಲಾಗಿದ್ದು, ಶೇ.67 ರಷ್ಟು ಪುರುಷರು ಹಾಗೂ ಶೇ.33 ರಷ್ಟು ಮಹಿಳೆಯರು ಪ್ರತಿಕ್ರಿಯೆ ನೀಡಿದ್ದಾರೆ. ಆಗಸ್ಟ್ 2022 ರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿವಿಧ ಮೊತ್ತದ ಬ್ಯಾಂಡ್‌ಗಳ ಆಧಾರದ ಮೇಲೆ UPI ಪಾವತಿಗಳ ಮೇಲೆ ಶ್ರೇಣೀಕೃತ ರಚನೆ ಶುಲ್ಕವನ್ನು ಪ್ರಸ್ತಾಪಿಸುವ ಚರ್ಚಾ ಪತ್ರಿಕೆಯನ್ನು ಬಿಡುಗಡೆ ಮಾಡಿತ್ತು. ಆರ್‌ಬಿಐ ಚರ್ಚಾ ಪತ್ರದ ನಂತರ, ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ ಎಂದು ಲೋಕಲ್ ಸರ್ಕಲ್ಸ್ ಯುಪಿಐ ವಹಿವಾಟು ಶುಲ್ಕದ ವರದಿಯಲ್ಲಿ ತಿಳಿಸಿದೆ.
"ಸಮೀಕ್ಷೆಗೆ ಒಳಗಾದ ಯುಪಿಐ ಬಳಕೆದಾರರಲ್ಲಿ ಶೇಕಡಾ 23 ರಷ್ಟು ಜನರು ಮಾತ್ರ ಪಾವತಿಯ ಮೇಲೆ ವಹಿವಾಟು ಶುಲ್ಕವನ್ನು ಭರಿಸಲು ಸಿದ್ಧರಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 73 ರಷ್ಟು ಜನರು ವಹಿವಾಟು ಶುಲ್ಕವನ್ನು ಪರಿಚಯಿಸಿದರೆ ಯುಪಿಐ ಬಳಸುವುದನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ" ಎಂದು ಸಮೀಕ್ಷೆ ಹೇಳಿದೆ. ಯುಪಿಐ ಬಳಕೆಯ ಫ್ರೀಕ್ವೆನ್ಸಿ (ಆವರ್ತನ)ದ ಕುರಿತು ಕೇಳಿದಾಗ, 2 ರಲ್ಲಿ 1 ಯುಪಿಐ ಬಳಕೆದಾರರು ಪ್ರತಿ ತಿಂಗಳು 10 ವಹಿವಾಟುಗಳನ್ನು ನಡೆಸುತ್ತಾರೆ ಎಂಬುದನ್ನು ಸಮೀಕ್ಷೆ ಕಂಡುಕೊಂಡಿದೆ. ಸಮೀಕ್ಷೆಯಲ್ಲಿ ಕೇಳಲಾದ ಪ್ರತಿ ಪ್ರಶ್ನೆಗೆ ಪ್ರತಿಕ್ರಿಯೆಗಳ ಸಂಖ್ಯೆಯು ವಿಭಿನ್ನವಾಗಿದೆ.
"ಕಳೆದ 12 ತಿಂಗಳುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ತಮ್ಮ ಯುಪಿಐ ಪಾವತಿಯ ಮೇಲೆ ವಹಿವಾಟು ಶುಲ್ಕವನ್ನು ವಿಧಿಸಲಾಗಿದೆ ಎಂದು ಸಮೀಕ್ಷೆಗೆ ಒಳಗಾದ ಶೇಕಡಾ 37 ಯುಪಿಐ ಬಳಕೆದಾರರು ಹೇಳಿಕೊಂಡಿದ್ದಾರೆ" ಎಂದು ಸಮೀಕ್ಷೆಯ ವರದಿ ಹೇಳಿದೆ.
Advertisement