ನವದೆಹಲಿ: ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕರ ಷರತ್ತುಗಳನ್ನು ವಿಧಿಸಲು ಸರ್ಕಾರಿ ಅಧಿಕಾರಿಗಳಿಗೆ 2,100 ಕೋಟಿ ರೂ. ಲಂಚ ನೀಡಿದ ಆರೋಪವನ್ನು ಗುರುವಾರ ಅದಾನಿ ಗುಂಪು ಸ್ಪಷ್ಟವಾಗಿ ನಿರಾಕರಿಸಿದೆ ಮತ್ತು ಅಮೆರಿಕ ಪ್ರಾಸಿಕ್ಯೂಟರ್‌ಗಳ ಆರೋಪ ಆಧಾರರಹಿತ ಎಂದು ಹೇಳಿದೆ.
"ಅದಾನಿ ಗ್ರೀನ್‌ನ ನಿರ್ದೇಶಕರ ವಿರುದ್ಧ ಅಮೆರಿಕ ನ್ಯಾಯಾಂಗ ಇಲಾಖೆ ಮತ್ತು ಅಮೆರಿಕ ಸೆಕ್ಯುರಿಟೀಸ್ ಹಾಗೂ ಎಕ್ಸ್‌ಚೇಂಜ್ ಕಮಿಷನ್ ಮಾಡಿರುವ ಆರೋಪಗಳು ಆಧಾರರಹಿತ" ಎಂದು ಅದಾನಿ ಗ್ರೂಪ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕರವಾದ ಷರತ್ತುಗಳನ್ನು ವಿಧಿಸಲು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ರೂ 2,100 ಕೋಟಿ) ಲಂಚ ನೀಡಲಾಗಿದೆ ಎಂದು ಬಿಲಿಯನೇರ್ ಗೌತಮ್ ಅದಾನಿ ವಿರುದ್ಧ ಅಮೆರಿಕ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಅದಾನಿ ಗ್ರೂಪ್ ವಕ್ತಾರರು, ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಆರೋಪಗಳು ಆಧಾರ ರಹಿತವಾಗಿದ್ದು, ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಆರೋಪಿಗಳನ್ನು ನಿರಪರಾಧಿ ಎಂದು ಭಾವಿಸಲಾಗುತ್ತದೆ" ಎಂದು ಹೇಳಿದ್ದಾರೆ.
"ಅದಾನಿ ಗ್ರೂಪ್ ತನ್ನ ಕಾರ್ಯಾಚರಣೆಗಳಲ್ಲಿ ಯಾವಾಗಲೂ ಪಾರದರ್ಶಕವಾಗಿರುತ್ತದೆ ಮತ್ತು ಸರ್ಕಾರದ ಮಾನದಂಡಗಳನ್ನು ನಿರ್ವಹಿಸಲು ದೃಢವಾಗಿ ಬದ್ಧವಾಗಿದೆ. ನಾವು ನಮ್ಮ ಪಾಲುದಾರರು, ಷೇರುದಾರರು ಮತ್ತು ಉದ್ಯೋಗಿಗಳಿಗೆ ನಾವು ಕಾನೂನು-ಪಾಲಿಸುವ ಸಂಸ್ಥೆಯಾಗಿದ್ದೇವೆ ಎಂದು ಭರವಸೆ ನೀಡುತ್ತೇವೆ" ಎಂದು ವಕ್ತಾರರು ತಿಳಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ಕೋರ್ಟ್‌ನಲ್ಲಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಸೇರಿ ಏಳು ಆರೋಪಿಗಳ ವಿರುದ್ಧ ಲಂಚ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ. ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಡಾಲರ್ ಲಾಭದ ನಿರೀಕ್ಷೆಯೊಂದಿಗೆ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ ಲಂಚ ನೀಡಿದ ಆರೋಪ ಗೌತಮ್ ಅದಾನಿ ವಿರುದ್ಧ ಕೇಳಿಬಂದಿದೆ.
2023ರಲ್ಲಿ ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಬಗ್ಗೆ ವರದಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ಲಂಚ ಪಾವತಿಯಾಗಿದೆ ಎಂದು ಹೇಳಲಾಗುತ್ತಿದೆ.
Advertisement