
ನವದೆಹಲಿ: ಇತ್ತೀಚಿಗೆ ದೇಶದ ಖಾಸಗಿ ಟೆಲಿಕಾಂ ಕಂಪನಿಗಳು ಟಾರಿಫ್ ಹೆಚ್ಚಳ ಮಾಡಿದ ಪರಿಣಾಮ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL)ಗೆ ದೊಡ್ಡ ಲಾಭವಾಗಿದ್ದು, ನಷ್ಟದಲ್ಲಿದ್ದ ಕಂಪನಿ ಸತತ ಎರಡನೇ ತಿಂಗಳು ಲಾಭ ಗಳಿಸಿದೆ.
ಆಗಸ್ಟ್ 2024 ರಲ್ಲಿ 2.5 ಮಿಲಿಯನ್ ಗ್ರಾಹಕರನ್ನು ಬಿಎಸ್ಎನ್ಎಲ್ ಸೇರಿಸಿಕೊಂಡಿದೆ. ಇದರೊಂದಿಗೆ BSNL ಗೆ ಚಂದಾದಾರರ ಸಂಖ್ಯೆ ಜುಲೈ 2024 ರಲ್ಲಿ 2.94 ಮಿಲಿಯನ್ ಗೆ ಹೆಚ್ಚಾಗಿದೆ.
ಜುಲೈ 2024 ರಲ್ಲಿ, ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್(ವಿಐಎಲ್) ಸೇರಿದಂತೆ ಎಲ್ಲಾ ಪ್ರಮುಖ ಖಾಸಗಿ ಟೆಲಿಕಾಂ ಪೂರೈಕೆದಾರರು ತಮ್ಮ ಟಾರಿಫ್ ಅನ್ನು ಶೇ. 25ರ ವರೆಗೆ ಹೆಚ್ಚಿಸಿದ್ದವು. ಈ ನಿರ್ಧಾರವು ದೇಶದ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳ ಚಂದಾದಾರರು ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಲು ಕಾರಣವಾಗಿದೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(TRAI) ಪ್ರಕಾರ, ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಆಗಸ್ಟ್ 2024 ರಲ್ಲಿ 4 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ 2.4 ಮಿಲಿಯನ್ ಮತ್ತು 1.87 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿವೆ. ಜುಲೈ 2024 ರಲ್ಲಿ, ಭಾರ್ತಿ ಏರ್‌ಟೆಲ್ 1,694,300 ಚಂದಾದಾರರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ 1,413,910 ಚಂದಾದಾರರನ್ನು ಕಳೆದುಕೊಂಡಿತು ಮತ್ತು ಜಿಯೋ 758,463 ಚಂದಾದಾರರ ಕಳೆದುಕೊಂಡಿದೆ.
ಮಾರುಕಟ್ಟೆ ಪಾಲಿನ ವಿಷಯದಲ್ಲಿ, BSNL ನ ಪಾಲು ಜುಲೈ 2024 ರಲ್ಲಿ ಶೇ. 7.59 ರಿಂದ ಆಗಸ್ಟ್ 2024 ರಲ್ಲಿ ಶೇ. 7.84 ಕ್ಕೆ ಏರಿಕೆಯಾಗಿದೆ.
ಏತನ್ಮಧ್ಯೆ, ಖಾಸಗಿ ಟೆಲಿಕೋಗಳು ಮಾರುಕಟ್ಟೆ ಷೇರಿನಲ್ಲಿ ಕುಸಿತ ಅನುಭವಿಸುವುದನ್ನು ಮುಂದುವರೆಸಿವೆ. ಜುಲೈ 2024 ರಲ್ಲಿ ಶೇ. 40.68 ರಷ್ಟು ಮಾರುಕಟ್ಟೆ ಷೇರು ಹೊಂದಿದ್ದ ರಿಲಯನ್ಸ್ ಜಿಯೋ, ಆಗಸ್ಟ್ 2024 ರಲ್ಲಿ ಶೇ. 40.53ಕ್ಕೆ ಕುಸಿಯಿತು. ಜುಲೈ 2024 ರಲ್ಲಿ ಶೇ. 33.23 ರಷ್ಟು ಮಾರುಕಟ್ಟೆ ಷೇರು ಹೊಂದಿದ್ದ ಭಾರ್ತಿ ಏರ್‌ಟೆಲ್, ಆಗಸ್ಟ್ 2024 ರಲ್ಲಿ ಶೇ. 33.07ಕ್ಕೆ ಕುಸಿಯಿತು.
ಹಾಗೆಯೇ, ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್, Vi ಜುಲೈ 2024 ರಲ್ಲಿ ಶೇ. 18.46 ರಷ್ಟು ಷೇರು ಹೊಂದಿತ್ತು, ಅದು ಶೇ. 18.39ಕ್ಕೆ ಕುಸಿದಿದೆ.
ಇತ್ತೀಚೆಗೆ, BSNLನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್ ರವಿ ಅವರು, ಕಂಪನಿಯು ಮುಂದಿನ ದಿನಗಳಲ್ಲಿ ಟಾರಿಫ್ ಹೆಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ BSNL ಗ್ರಾಹಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
Advertisement