

ನವದೆಹಲಿ: ದೀಪಾವಳಿ ಹಬ್ಬದ ಸಮಯದಲ್ಲೇ ಚಿನ್ನದ ಬೆಲೆ ಭರ್ಜರಿ ಏರಿಕೆಯಾಗಿದ್ದು, ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಬಂಗಾರದ ಬೆಲೆಯು 10 ಗ್ರಾಂಗೆ 1 ಸಾವಿರ ರೂಪಾಯಿ ಹೆಚ್ಚಾಗಿದೆ. ಇದರೊಂದಿಗೆ ಮೊದಲ ಬಾರಿಗೆ ಬಂಗಾರದ ಬೆಲೆಯು 82,000 ರೂಪಾಯಿ ಗಡಿ ದಾಟಿದೆ.
ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ಶೇ. 99.9 ರಷ್ಟು ಶುದ್ಧತೆಯ ಹಳದಿ ಲೋಹ(24 ಕ್ಯಾರಟ್ ಬಂಗಾರದ ಬೆಲೆ)ವು ದೆಹಲಿಯಲ್ಲಿ 10 ಗ್ರಾಂಗೆ 1,000 ರೂ ಹೆಚ್ಚಾಗುವ ಮೂಲಕ 82,400 ರೂ.ಗೆ ಏರಿಕೆಯಾಗಿದೆ.
ಶೇ. 99.5 ರಷ್ಟು ಶುದ್ಧತೆಯ ಬೆಲೆಬಾಳುವ ಲೋಹವು ಸ್ಥಳೀಯ ಮಾರುಕಟ್ಟೆಗಳಲ್ಲಿ 10 ಗ್ರಾಂಗೆ 1 ಸಾವಿರ ರೂಪಾಯಿ ಹೆಚ್ಚಾಗುವ ಮೂಲಕ ಸಾರ್ವಕಾಲಿಕ ಗರಿಷ್ಠ 82,000 ರೂಪಾಯಿಗೆ ತಲುಪಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ, ಅನಿಶ್ಚಿತ ರಾಜಕೀಯ ಪರಿಸ್ಥಿತಿಯಿಂದಾಗಿ ಮತ್ತು ದೀಪಾವಳಿಯ ಸಮಯದಲ್ಲಿ ಹೆಚ್ಚುತ್ತಿರುವ ಬೇಡಿಕೆ, ಯುದ್ಧ, ಹಣದುಬ್ಬರ, ಷೇರು ಮಾರುಕಟ್ಟೆಯ ಏರಿಳಿತಗಳೂ ಚಿನ್ನದ ಬೆಲೆಯಲ್ಲಿ ತೀವ್ರ ಜಿಗಿತಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
Advertisement