
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ ಸುಂಕ ಯೋಜನೆ ಜಾರಿಗೊಳಿಸಿದ್ದರಿಂದ ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ತಲ್ಲಣಗೊಂಡಿದ್ದು, ಚೀನಾ ಮತ್ತು ಅಮೆರಿಕ ನಡುವಿನ ಸುಂಕ ಸಮರದೊಂದಿಗೆ ಈ ತಿಂಗಳ ಆರಂಭದಿಂದ ಹೂಡಿಕೆದಾರರ ರೂ 11.30 ಲಕ್ಷ ಕೋಟಿ ಸಂಪತ್ತು ಕರಗಿದೆ. BSE ಸೆನ್ಸೆಕ್ಸ್ ಸುಮಾರು ಶೇ. 2 ರಷ್ಟು ಕುಸಿದಿದೆ.
ಏಪ್ರಿಲ್ 2 ರಿಂದ ಸೆನ್ಸೆಕ್ಸ್ 1,460.18 ಪಾಯಿಂಟ್ ಅಥವಾ ಶೇ. 1.90 ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಬಿಎಸ್‌ಇ ಪಟ್ಟಿಯಲ್ಲಿರುವ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ ರೂ.11, 30,627.09 ಕೋಟಿಯಿಂದ ರೂ. 4,01,67,468.51 ಕೋಟಿಗೆ (4.66 ಟ್ರಿಲಿಯನ್ ಡಾಲರ್ ) ಕುಸಿದಿದೆ.
ಅಮೆರಿಕದಿಂದ 90 ದಿನಗಳ ಹೆಚ್ಚುವರಿ ಆಮದು ಸುಂಕ ಅಮಾನತ್ತಿನಿಂದ ಹೂಡಿಕೆದಾರರು ಸ್ವಲ್ಪ ಸಂತೃಪ್ತರಾಗಿದ್ದರಿಂದ ಸೂಚ್ಯಂಕಗಳು ಶುಕ್ರವಾರ ಸುಮಾರು ಶೇ. 2 ರಷ್ಟು ಜಿಗಿದಿತ್ತು.
ಏಪ್ರಿಲ್ 10 ರಂದು ಮಹಾವೀರ ಜಯಂತಿ ಮತ್ತು ಏಪ್ರಿಲ್ 14 ರಂದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಕಾರಣ ಎರಡು ಸಂದರ್ಭಗಳಲ್ಲಿ ಷೇರು ಮಾರುಕಟ್ಟೆ ಬಂದ್ ಆಗಿತ್ತು. ಏಪ್ರಿಲ್ ಮೊದಲ ವಾರದಲ್ಲಿ ಟ್ರಂಪ್ ಸುಂಕ ಯೋಜನೆಯನ್ನು ಜಾರಿಗೊಳಿಸಿದ್ದರು.
ಬಳಿಕ ಶ್ವೇತಭವನ ಅಮೆರಿಕದಿಂದ ಆಮದಾಗುವ ಸರಕುಗಳ ಮೇಲೆ ಶೇ. 125ರಷ್ಟು ಪ್ರತಿ ಸುಂಕ ವಿಧಿಸಿದ ಚೀನಾ ಹೊರತುಪಡಿಸಿ ಬಹುತೇಕ ರಾಷ್ಟ್ರಗಳ ಪರಸ್ಪರ ಸುಂಕಗಳ ಮೇಲೆ 90 ದಿನಗಳ ವಿರಾಮವನ್ನು ಘೋಷಿಸಿತು. ಅಮೆರಿಕದ ಶೇ.145 ಸುಂಕಕ್ಕೆ ಪ್ರತೀಕಾರವಾಗಿ ಅಮೆರಿಕದ ಸರಕುಗಳ ಮೇಲಿನ ಹೆಚ್ಚುವರಿ ಸುಂಕವನ್ನು ಚೀನಾ ಶುಕ್ರವಾರ ಶೇ.125ಕ್ಕೆ ಏರಿಸಿದೆ.
Advertisement