
ಬೆಂಗಳೂರು: ಮೈಸೂರಿನಲ್ಲಿ ತನ್ನ ಉತ್ಪಾದನೆ ಮತ್ತು ಎಂಜಿನಿಯರಿಂಗ್ ಕಾರ್ಯಾಚರಣೆಗಳನ್ನು ವಿಸ್ತರಿಸುವುದರ ಜೊತೆಗೆ ಕರ್ನಾಟಕದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು ಸ್ಥಾಪಿಸುವುದಾಗಿ ಟಿವಿಎಸ್ ಮೋಟಾರ್ ಕಂಪನಿ ಹೇಳಿದೆ.
ಕಂಪನಿಯು ರಾಜ್ಯದಲ್ಲಿ ಪರೀಕ್ಷಾ ಟ್ರ್ಯಾಕ್ ಅನ್ನು ನಿರ್ಮಿಸುತ್ತದೆ ಮತ್ತು ರಾಜ್ಯದಲ್ಲಿ ಹೊಸ ಕೇಂದ್ರಗಳನ್ನು ಆರಂಭಿಸಲು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ ಎಂದು ಟಿವಿಎಸ್ ಹೇಳಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಐಎಂ) ಇನ್ವೆಸ್ಟ್ ಕರ್ನಾಟಕ 2025 ಉದ್ಘಾಟನಾ ಸಮಾರಂಭದಲ್ಲಿ ಟಿವಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಅವರು ಕಂಪನಿಯ ಯೋಜನೆಯನ್ನು ವಿವರಿಸಿದರು.
ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 2,000 ಕೋಟಿ ರೂ. ಹೂಡಿಕೆ ಮಾಡಲು ಟಿವಿಎಸ್ಎಂ ಮಂಗಳವಾರ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
"ಮುಂದಿನ ತಲೆಮಾರಿನ ಬೈಕ್‌ಗಳ ಜನ್ಮಸ್ಥಳವಾಗಲು ಉನ್ನತ ಪ್ರತಿಭೆಗಳು ಮತ್ತು ಉತ್ತಮ ವಿಚಾರಗಳನ್ನು ಸೆಳೆಯುವ ಮತ್ತು ಸಂಶೋಧನಾ ಸೌಲಭ್ಯವನ್ನು ಹೊಂದಿರುವ ಸಾಮರ್ಥ್ಯ ಕೇಂದ್ರವನ್ನು ನಾವು ಕಲ್ಪಿಸಿಕೊಳ್ಳುತ್ತೇವೆ ಎಂದು ಸುದರ್ಶನ್ ವೇಣು ಅವರು ಹೇಳಿದ್ದಾರೆ.
ಟಿವಿಎಸ್ ಮೋಟಾರ್ ಕಂಪನಿ ಜಾಗತಿಕವಾಗಿ 58 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಿಶ್ವದ ನಾಲ್ಕನೇ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಯಾಗಿ ಹೊರಹೊಮ್ಮಿದೆ ಎಂದು ಅವರು ತಿಳಿಸಿದ್ದಾರೆ.
ಕಂಪನಿಯ ಪ್ರಕಾರ, ಟಿವಿಎಸ್ ಮೋಟಾರ್ ನ ಉತ್ಪಾದನಾ ಘಟಕ ಮೈಸೂರಿನಲ್ಲಿದ್ದು, ವಾರ್ಷಿಕ 1.5 ಮಿಲಿಯನ್ ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ ಮತ್ತು 3,500 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ.
Advertisement