
ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಮುಖ್ಯಸ್ಥರಾಗಿ ತುಹಿನ್ ಕಾಂತ ಪಾಂಡೆ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಸಂಪುಟದ ನೇಮಕಾತಿ ಸಮಿತಿಯ ಅನುಮೋದನೆಯ ನಂತರ, ಹಣಕಾಸು ಕಾರ್ಯದರ್ಶಿ ಪಾಂಡೆ ಅವರು ಮೂರು ವರ್ಷಗಳ ಅವಧಿಗೆ ಸೆಬಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಸೆಬಿ ಹಾಲಿ ಮುಖ್ಯಸ್ಥರಾಗಿರುವ ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿ ಮಾ.1 ರಂದು ಕೊನೆಗೊಳ್ಳಲಿದೆ. ಇವರು 2022ರ ಮಾ.2 ರಂದು ಮೊದಲ ಮಹಿಳಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಪಾಂಡೆ ಅವರು ಪ್ರಸ್ತುತ ಹಣಕಾಸು ಸಚಿವಾಲಯದಲ್ಲಿ ಹಿರಿಯ ಅಧಿಕಾರಿಗಳಲ್ಲಿ ಮೊದಲ ಸಾಲಿನನವರಾಗಿದ್ದು, ತೆರಿಗೆ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದಕ್ಕೂ ಮೊದಲು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಇವರು ಏರ್ ಇಂಡಿಯಾದ ಖಾಸಗೀಕರಣ ಹಾಗೂ ಎಲ್‌ಐಸಿ ಸಂಸ್ಥೆ ಸಾರ್ವಜನಿಕ ಹೂಡಿಕೆಯಲ್ಲಿ ಸೇರಲು ಪ್ರಮುಖ ಪಾತ್ರವಹಿಸಿದ್ದರು.
ಮೂಲತಃ ಪಂಜಾಬ್‌ನವರಾದ ಪಾಂಡೆ ಪಂಜಾಬ್ ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಒಡಿಶಾದಲ್ಲಿ ಐಎಎಸ್ ಅಧಿಕಾರಿಯಾದ ನಂತರ ಜಿಲ್ಲಾಧಿಕಾರಿ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಸರ್ಕಾರಿ ಅಧಿಸೂಚನೆಯಂತೆ ಪಾಂಡೆ ಅವರನ್ನು ಸಂಪುಟ ಸಮಿತಿಯು ಮೂರು ವರ್ಷದವರೆಗೆ ಸೆಬಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಅನುಮೋದಿಸಿದೆ. ತುಹಿನ್ ಕಾಂತ ಪಾಂಡೆ ಅವರು ಮಾಧಬಿ ಪುರಿ ಬುಚ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಮಾಧಬಿ ಪುರಿ ಬುಚ್ ಅವರು ಸೆಬಿಯ ಮೊದಲ ಮಹಿಳಾ ಮುಖ್ಯಸ್ಥರಾಗಿದ್ದರು.
Advertisement