
ನವದೆಹಲಿ: ಜೂನ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಮೈನಸ್ ಶೇ. 0.13ಕ್ಕೆ ಇಳಿದಿದೆ. ಆಹಾರ ವಸ್ತು ಮತ್ತು ಇಂಧನ ದರಗಳೊಂದಿಗೆ ಪ್ರಮುಖ ಉತ್ಪನ್ನಗಳ ವೆಚ್ಚ ಕಡಿಮೆ ಆಗಿರುವುದು ಡಬ್ಲ್ಯೂಪಿಐ ಆಧಾರಿತ ಹಣದುಬ್ಬರ ದರದ ಇಳಿಕೆಗ ಪ್ರಮುಖ ಕಾರಣವಾಗಿದೆ ಎಂದು ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಹೇಳಲಾಗಿದೆ.
ಮೇ ತಿಂಗಳಲ್ಲಿ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಶೇ.0.39 ರಷ್ಟಿತ್ತು. ಕಳೆದ ವರ್ಷ ಜೂನ್ ನಲ್ಲಿ ಶೇ.3.43ರಷ್ಟಿತ್ತು.
ಆಹಾರ ವಸ್ತು, ಇಂಧನ, ಖನಿಜ ತೈಲ, ಮೂಲ ಲೋಹಗಳ ತಯಾರಿಕೆ ವೆಚ್ಚ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಬೆಲೆಗಳು ಇಳಿದಿರುವುದು ಜೂನ್ 2025 ರಲ್ಲಿ ಸಗಟು ದರ ಹಣದುಬ್ಬರ ಸೂಚ್ಯಂಕ ಇಳಿಕೆಗೆ ಪ್ರಾಥಮಿಕ ಕಾರಣವೆಂದು ತಿಳಿದುಬಂದಿದೆ ಎಂದು ಉದ್ಯಮ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸಗಟು ದರ ಸೂಚ್ಯಂಕ(WPI)ಪ್ರಕಾರ, ಆಹಾರ ವಸ್ತುಗಳು ಜೂನ್‌ನಲ್ಲಿ ಶೇಕಡಾ 3.75 ರಷ್ಟು ಹಣದುಬ್ಬರವಿಳಿತ ಕಂಡಿದೆ. ತರಕಾರಿ ಬೆಲೆಗಳು ತೀವ್ರ ಕುಸಿತದೊಂದಿಗೆ ಮೇ ತಿಂಗಳಲ್ಲಿ ಶೇಕಡಾ 1.56 ರ ಹಣದುಬ್ಬರವಿಳಿತ ಕಂಡುಬಂದಿತ್ತು.
ತರಕಾರಿಗಳಲ್ಲಿನ ಹಣದುಬ್ಬರವಿಳಿತವು ಜೂನ್‌ನಲ್ಲಿ ಶೇಕಡಾ 22.65 ರಷ್ಟಿದ್ದರೆ, ಮೇ ತಿಂಗಳಿನಲ್ಲಿ ಶೇಕಡಾ 21.62 ರಷ್ಟಿತ್ತು. ತಯಾರಿಕ ವೆಚ್ಚದಲ್ಲಿ ಮೇ ತಿಂಗಳಿನಲ್ಲಿ ಶೇ. 2.04 ರಷ್ಟಿದ್ದ ಹಣದುಬ್ಬರ ಜೂನ್ ನಲ್ಲಿ ಶೇ. 1. 97 ರಷ್ಟಿದೆ. ಇಂಧನ ಮತ್ತು ತೈಲ ಜೂನ್‌ನಲ್ಲಿ ಶೇ. 2.65 ರಷ್ಟು ಹಣದುಬ್ಬರ ಇಳಿಕೆಯಾಗಿದೆ. ಮೇ ತಿಂಗಳಲ್ಲಿ ಇದು ಶೇ. 2.27 ರಷ್ಟಿತ್ತು.
ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿತ್ತೀಯ ನೀತಿಯನ್ನು ರೂಪಿಸುವಾಗ ಮುಖ್ಯವಾಗಿ ರೀಟೇಲ್ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಜೂನ್ ತಿಂಗಳ ಚಿಲ್ಲರೆ ಹಣದುಬ್ಬರದ ಅಂಕಿಅಂಶಗಳನ್ನು ನಂತರದ ದಿನಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹಣದುಬ್ಬರ ತಗ್ಗಿಸುವ ಹಿನ್ನೆಲೆಯಲ್ಲಿ ಆರ್‌ಬಿಐ ಕಳೆದ ತಿಂಗಳು ಬಡ್ಡಿದರಗಳನ್ನು ಶೇ.0.50 ರಿಂದ ಶೇ.5.50 ರಷ್ಟು ಕಡಿತಗೊಳಿಸಿತ್ತು.
Advertisement