ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಎಂಟ್ರಿ; 60 ಲಕ್ಷ ರೂ ಮೌಲ್ಯದ Model Y ಎಲೆಕ್ಟ್ರಿಕ್ ಕಾರು ಬಿಡುಗಡೆ

ಮೂಲಗಳ ಪ್ರಕಾರ, ಟೆಸ್ಲಾ ತನ್ನ ಚೀನಾ ಸೌಲಭ್ಯದಲ್ಲಿ ತಯಾರಿಸಿದ ಕಾರುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
Tesla
ಟೆಸ್ಲಾ
Updated on

ಮುಂಬೈ: ಟೆಸ್ಲಾ ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರು ಮಾಡೆಲ್ ವೈ ಮೂಲಕ ಇಂದು ಮಂಗಳವಾರ ಜುಲೈ 15ರಂದು ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದು, ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ತನ್ನ ಮೊದಲ ಚಿಲ್ಲರೆ ಮಾರಾಟ ಕೇಂದ್ರವನ್ನು ತೆರೆದಿದೆ. ಅಮೆರಿಕಾ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯು ಭಾರತದಲ್ಲಿ ಮಾಡೆಲ್ ವೈಯನ್ನು 59.89 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಗೆ (ಎಕ್ಸ್-ಶೋರೂಂ ಬೆಲೆ) ಬಿಡುಗಡೆ ಮಾಡಿದೆ.

ರಿಯರ್ ವೀಲ್ ಡ್ರೈವ್ (RWD) ಆಯ್ಕೆಯಲ್ಲಿ ಮಾತ್ರ ಈ ಕಾರು ಲಭ್ಯವಿದೆ. ಮಾಡೆಲ್ ವೈ ಲಾಂಗ್ ರೇಂಜ್ ಆರ್ ಡಬ್ಲ್ಯುಡಿ ಬೆಲೆಯನ್ನು 67.89 ಲಕ್ಷ ರೂಪಾಯಿಗಳಾಗಿದೆ. ಈ ಎಲೆಕ್ಟ್ರಿಕ್ ಕಾರು ಆರಂಭದಲ್ಲಿ ಮುಂಬೈ, ದೆಹಲಿ ಮತ್ತು ಗುರುಗ್ರಾಮ್ ನಗರಗಳಲ್ಲಿ ಲಭ್ಯವಿರುತ್ತದೆ. ಈ ಮಾದರಿಯ ವಿತರಣೆಗಳು ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಲಿವೆ.

ಮೂಲಗಳ ಪ್ರಕಾರ, ಟೆಸ್ಲಾ ತನ್ನ ಚೀನಾ ಸೌಲಭ್ಯದಲ್ಲಿ ತಯಾರಿಸಿದ ಕಾರುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಭಾರತದ ಮಾರುಕಟ್ಟೆ ಬೆಲೆ ಇತರ ಮಾರುಕಟ್ಟೆಗಳಿಗಿಂತ ಹೆಚ್ಚಾಗಿದೆ.

ಏಕೆಂದರೆ ಮಾಡೆಲ್ ವೈ ಬೆಲೆಗಳು ಅಮೆರಿಕದಲ್ಲಿ 38.6 ಲಕ್ಷ ರೂಪಾಯಿ ($44,990), ಚೀನಾದಲ್ಲಿ 30.5 ಲಕ್ಷ ರೂ.(263,500 ಯುವಾನ್), ಜರ್ಮನಿಯಲ್ಲಿ 46 ಲಕ್ಷ ರೂಪಾಯಿ (€45,970) ರಿಂದ ಪ್ರಾರಂಭವಾಗುತ್ತವೆ. ಭಾರತದಲ್ಲಿ ಹೆಚ್ಚಿನ ಬೆಲೆಗಳು ಆಮದು ಸುಂಕ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳಿಗೆ ಕಾರಣವಾಗಿವೆ. ಭಾರತವು 40,000 ಡಾಲರ್ ಗಿಂತ ಕಡಿಮೆ ಬೆಲೆಯ ಆಮದು ಮಾಡಿದ ಕಾರುಗಳ ಮೇಲೆ ಶೇಕಡಾ 70ರಷ್ಟು ಸುಂಕವನ್ನು ವಿಧಿಸುತ್ತದೆ.

Tesla
Explainer: ಮಸುಕಾಗುತ್ತಿದೆ Elon Musk ಸಾಮ್ರಾಜ್ಯ?; Tesla ಮಾರಾಟ, ಷೇರುಗಳ ತೀವ್ರ ಕುಸಿತಕ್ಕೆ ಇದೇ ಕಾರಣ...

ಭಾರತದಲ್ಲಿ ಟೆಸ್ಲಾ ಕಂಪನಿಯ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಜರ್ಮನ್ ಐಷಾರಾಮಿ ವಾಹನ ತಯಾರಕರಾದ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್-ಬೆನ್ಜ್ ಮಾರಾಟ ಮಾಡುವ ಆರಂಭಿಕ ಮಟ್ಟದ ಎಲೆಕ್ಟ್ರಿಕ್ ಕಾರುಗಳ ಎದುರು ಸ್ಪರ್ಧಿಸಲಿದೆ. ಮಾಡೆಲ್ ವೈ ಆರ್‌ಡಬ್ಲ್ಯುಡಿ ರೂಪಾಂತರವು ಭಾರತೀಯ ಮಾರುಕಟ್ಟೆಯಲ್ಲಿ 60 ಕಿಲೋವ್ಯಾಟ್ ಮತ್ತು ದೊಡ್ಡ 75 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. 60 ಕಿಲೋವ್ಯಾಟ್ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ 500 ಕಿಲೋಮೀಟರ್ ಡಬ್ಲ್ಯುಎಲ್ ಟಿಪಿ ವ್ಯಾಪ್ತಿಯನ್ನು ನೀಡುತ್ತದೆ, ದೀರ್ಘ ಶ್ರೇಣಿಯ ರೂಪಾಂತರವು 622 ಕಿಲೋಮೀಟರ್ ಎಂದು ಹೇಳಿಕೊಂಡಿದೆ.

ಕಳೆದ ತಿಂಗಳು, ಟೆಸ್ಲಾ ಇಂಡಿಯಾ ಮುಂಬೈನ ಲೋಧಾ ಲಾಜಿಸ್ಟಿಕ್ಸ್ ಪಾರ್ಕ್‌ನಲ್ಲಿ 24,565 ಚದರ ಅಡಿ ಗೋದಾಮಿನ ಜಾಗವನ್ನು ಐದು ವರ್ಷಗಳ ಕಾಲ ಗುತ್ತಿಗೆಗೆ ತೆಗೆದುಕೊಂಡಿತು. ಜೂನ್‌ನಲ್ಲಿ, ಕೇಂದ್ರ ಭಾರೀ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಎಲೋನ್ ಮಸ್ಕ್ ನೇತೃತ್ವದ ಕಂಪನಿಯು ಭಾರತದಲ್ಲಿ ಕಾರುಗಳನ್ನು ಉತ್ಪಾದಿಸಲು ಆಸಕ್ತಿ ಹೊಂದಿಲ್ಲ ಆದರೆ ದೇಶದಲ್ಲಿ ಶೋರೂಮ್‌ಗಳನ್ನು ಸ್ಥಾಪಿಸಲು ಉತ್ಸುಕವಾಗಿದೆ ಎಂದು ಹೇಳಿದ್ದರು.

ಈ ವರ್ಷದ ಆರಂಭದಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭಾರತವು ಟೆಸ್ಲಾಗೆ ಸರಿಹೊಂದುವಂತೆ ತನ್ನ ನೀತಿಗಳನ್ನು ರೂಪಿಸುವುದಿಲ್ಲ. ಪ್ರಪಂಚದಾದ್ಯಂತದ ಎಲ್ಲಾ ವಿದ್ಯುತ್ ವಾಹನ ತಯಾರಕರನ್ನು ಆಕರ್ಷಿಸಲು ಅದರ ಕಾನೂನುಗಳು ಮತ್ತು ಸುಂಕ ನಿಯಮಗಳನ್ನು ರೂಪಿಸಲಾಗುವುದು ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com