
ಅತಿ ಶ್ರೀಮಂತರು, ಗಣ್ಯರು, ಉದ್ಯಮಿಗಳು ತಮ್ಮ ವಿವಿಧ ಆದಾಯ ಮೂಲಗಳನ್ನು ಸರ್ಕಾರಕ್ಕೆ ತೋರಿಸದೆ ಮುಚ್ಚಿಡಲು ನೋಡುತ್ತಾರೆ, ಅದರಿಂದ ತೆರಿಗೆ ಪಾವತಿಸುವುದನ್ನು ತಪ್ಪಿಸಬಹುದೆಂಬ ಐಡಿಯಾ. ತೆರಿಗೆದಾರರು ತಮ್ಮ ವಿದೇಶಿ ಆಸ್ತಿ ಮತ್ತು ಆದಾಯವನ್ನು ಬಹಿರಂಗಪಡಿಸುವುರಿಂದ ತಪ್ಪಿಸಿಕೊಳ್ಳದಂತೆ ತಡೆಯಲು ವಿಶೇಷ ಅಭಿಯಾನವನ್ನು ಸರ್ಕಾರ ನಡೆಸುತ್ತಿದೆ. ಇದರಿಂದ 30,000 ಕ್ಕೂ ಹೆಚ್ಚು ತೆರಿಗೆದಾರರು 29,208 ಕೋಟಿ ಮೌಲ್ಯದ ವಿದೇಶಿ ಆಸ್ತಿಗಳನ್ನು ಮತ್ತು 1,090 ಕೋಟಿ ಹೆಚ್ಚುವರಿ ವಿದೇಶಿ ಆದಾಯವನ್ನು ಘೋಷಿಸಿದ್ದಾರೆ. ಈ ಅಭಿಯಾನದಿಂದಾಗಿ 6,734 ತೆರಿಗೆದಾರರು ತಮ್ಮ ವಸತಿ ನೆಲೆಯನ್ನು ನಿವಾಸಿ ಸ್ಥಿತಿಯಿಂದ ನಿವಾಸೇತರ ಸ್ಥಿತಿಗೆ ಬದಲಾಯಿಸಿಕೊಳ್ಳುವಂತೆ ಮಾಡಿದೆ.
ನೇರ ತೆರಿಗೆಗಳ ಕೇಂದ್ರ ಮಂಡಳಿ (CBDT) ಕಳೆದ ವರ್ಷ ನವೆಂಬರ್ 17ರಂದು ಅನುಸರಣೆ-ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿತು, ತೆರಿಗೆದಾರರು ತಮ್ಮ ವಿದೇಶಿ ಆಸ್ತಿ ಮತ್ತು ಆದಾಯವನ್ನು ಮೌಲ್ಯಮಾಪನ ವರ್ಷ (Assessment year) 2024-25 ಕ್ಕೆ ಪರಿಷ್ಕೃತ ಆದಾಯ ತೆರಿಗೆ ಸಲ್ಲಿಕೆಗಳಲ್ಲಿ (ITR) ಘೋಷಿಸುವಂತೆ ಒತ್ತಾಯಿಸಲಾಗುತ್ತಿದೆ. ಅಭಿಯಾನದ ಭಾಗವಾಗಿ, ಹೆಚ್ಚಿನ ವಿದೇಶಿ ಖಾತೆ ಬಾಕಿ ಅಥವಾ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಬಡ್ಡಿ ಅಥವಾ ಲಾಭಾಂಶದಿಂದ ಸಾಕಷ್ಟು ವಿದೇಶಿ ಆದಾಯವನ್ನು ಹೊಂದಿರುವ 19,501 ತೆರಿಗೆದಾರರಿಗೆ ಎಸ್ ಎಂಎಸ್ ಮತ್ತು ಇಮೇಲ್‌ಗಳನ್ನು ಕಳುಹಿಸಲಾಗಿದೆ. ತೆರಿಗೆ ಇಲಾಖೆಯು ಭಾರತದಾದ್ಯಂತ 30 ಔಟ್ರೀಚ್ ಸೆಷನ್‌ಗಳು, ಸೆಮಿನಾರ್‌ಗಳು ಮತ್ತು ವೆಬಿನಾರ್‌ಗಳನ್ನು ಸಹ ಆಯೋಜಿಸಿದ್ದು, 8,500 ಕ್ಕೂ ಹೆಚ್ಚು ಮಂದಿ ತೆರಿಗೆದಾರರು ಭಾಗವಹಿಸಿದ್ದರು.
ಆದಾಯ ತೆರಿಗೆ ಇಲಾಖೆ ಸಂಪರ್ಕಿಸಿದ ತೆರಿಗೆದಾರರಲ್ಲಿ ಸುಮಾರು ಶೇ. 62 ರಷ್ಟು ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ವಿದೇಶಿ ಆಸ್ತಿ ಮತ್ತು ಆದಾಯವನ್ನು ಘೋಷಿಸಲು ತಮ್ಮ ಐಟಿಆರ್‌ಗಳನ್ನು ಸ್ವಯಂಪ್ರೇರಣೆಯಿಂದ ಪರಿಷ್ಕರಿಸಿದ್ದಾರೆ. ವಿದೇಶಿ ಆಸ್ತಿ ಮತ್ತು ಆದಾಯವನ್ನು ಸ್ವಯಂಪ್ರೇರಿತ ಆಧಾರದ ಮೇಲೆ ಬಹಿರಂಗಪಡಿಸುವ ತೆರಿಗೆದಾರರ ಸಂಖ್ಯೆ 2021-22 ಮೌಲ್ಯಮಾಪನ ವರ್ಷದಲ್ಲಿ 60 ಸಾವಿರದಿಂದ 2024-25 ಮೌಲ್ಯಮಾಪನ ವರ್ಷದಲ್ಲಿ 2,31,452ಕ್ಕೆ ಸ್ಥಿರವಾಗಿ ಬೆಳೆದಿದೆ.
ಈ ವರ್ಷ, ವ್ಯಾಪಕವಾದ ಸಂಪರ್ಕ ಮತ್ತು ಜಾಗೃತಿ ಪ್ರಯತ್ನಗಳಿಂದಾಗಿ, ಸ್ವಯಂಪ್ರೇರಿತ ಆದಾಯ ಬಹಿರಂಗಪಡಿಸುವಿಕೆಗಳು 2023-24ರ ವರ್ಷಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಶೇಕಡಾ 45.17ಕ್ಕೆ ಏರಿಕೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ತೆರಿಗೆ ಇಲಾಖೆಯು 108 ಕ್ಕೂ ಹೆಚ್ಚು ದೇಶಗಳು ಹಂಚಿಕೊಂಡ ಮಾಹಿತಿಯನ್ನು ಭಾರತದ ಹೊರಗೆ ಗಳಿಸಿದ ಬಡ್ಡಿ ಮತ್ತು ಲಾಭಾಂಶದ ರೂಪದಲ್ಲಿ ವಿದೇಶಿ ಖಾತೆಗಳು ಮತ್ತು ಆದಾಯದ ಬಗ್ಗೆ ಮಾಹಿತಿಯ ಸ್ವಯಂಚಾಲಿತ ವಿನಿಮಯದ ಅಡಿಯಲ್ಲಿ ಬಳಸಿಕೊಂಡಿದೆ.
ಭಾರತವು ಸಾಮಾನ್ಯ ವರದಿ ಮಾಡುವ ಮಾನದಂಡಗಳನ್ನು (CRS) ಮೊದಲು ಅಳವಡಿಸಿಕೊಂಡ ದೇಶಗಳಲ್ಲಿ ಒಂದಾಗಿದೆ. 2016 ಮತ್ತು 2017ನೇ ವರ್ಷಕ್ಕೆ 2018 ರಿಂದ ಅಂಕಿಅಂಶಗಳನ್ನು ಸ್ವೀಕರಿಸುತ್ತಿದೆ. 125 ಕ್ಕೂ ಹೆಚ್ಚು ದೇಶಗಳು ಇತರ ನ್ಯಾಯವ್ಯಾಪ್ತಿಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಹಣಕಾಸಿನ ಮಾಹಿತಿಯನ್ನು ಸ್ವಯಂಚಾಲಿತ ಆಧಾರದ ಮೇಲೆ ಹಂಚಿಕೊಳ್ಳಲು ಒಪ್ಪಿಕೊಂಡಿವೆ, ಇದರಲ್ಲಿ ಖಾತೆಗಳ ವಿವರಗಳು, ಖಾತೆ ಬಾಕಿಗಳು, ಲಾಭಾಂಶಗಳು, ಸ್ವೀಕರಿಸಿದ ಬಡ್ಡಿ ಮತ್ತು ಒಟ್ಟು ಪಾವತಿಗಳು ಸೇರಿವೆ. ವಿದೇಶಿ ಖಾತೆಗಳ ತೆರಿಗೆ ಅನುಸರಣೆ ಕಾಯ್ದೆ (FATCA), 2010 ರ ಪ್ರಕಾರ ಅಂತರ-ಸರ್ಕಾರಿ ಒಪ್ಪಂದದ ಅಡಿಯಲ್ಲಿ ಯುಎಸ್ ಎಯೊಂದಿಗೆ ಇದೇ ರೀತಿಯ ವಿನಿಮಯ ಹೊಂದಿದೆ.
Advertisement