

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 5,817 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳು ಇನ್ನೂ ಚಲಾವಣೆಯಲ್ಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮೇ 19, 2023 ರಂದು 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಆದರೆ 2,000 ರೂ.ಗಳ ಕಾನೂನುಬದ್ಧ ಚಲಾವಣೆ ಮುಂದುವರೆದಿದೆ.
ಹಿಂತೆಗೆತವನ್ನು ಘೋಷಿಸಿದಾಗ ಚಲಾವಣೆಯಲ್ಲಿರುವ 2000 ರೂ. ನೋಟುಗಳ ಒಟ್ಟು ಮೌಲ್ಯವು ಮೇ 19, 2023 ರಂದು ವ್ಯವಹಾರದ ಮುಕ್ತಾಯದ ಸಮಯದಲ್ಲಿ 3.56 ಲಕ್ಷ ಕೋಟಿ ರೂ.ಗಳಷ್ಟಿತ್ತು. ಅದು ಅಕ್ಟೋಬರ್ 31, 2025 ರಂದು ವ್ಯವಹಾರ ಮುಕ್ತಾಯದ ಸಮಯದಲ್ಲಿ 5,817 ಕೋಟಿ ರೂ.ಗಳಿಗೆ ಇಳಿದಿದೆ ಎಂದು ಕೇಂದ್ರ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
"ಹೀಗಾಗಿ, ಮೇ 19, 2023 ರಂದು ಚಲಾವಣೆಯಲ್ಲಿರುವ 2000 ರೂ. ನೋಟುಗಳಲ್ಲಿ ಶೇ. 98.37 ರಷ್ಟು ಹಿಂತಿರುಗಿದೆ" ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಮೇ 19, 2023 ರಿಂದ RBI ನ 19 ವಿತರಣಾ ಕಚೇರಿಗಳಲ್ಲಿ 2,000 ರೂ. ನೋಟುಗಳ ವಿನಿಮಯ ಸೌಲಭ್ಯ ಇನ್ನೂ ಲಭ್ಯವಿದೆ.
ಅಕ್ಟೋಬರ್ 9, 2023 ರಿಂದ, RBI ವಿತರಣಾ ಕಚೇರಿಗಳು ವ್ಯಕ್ತಿಗಳು/ಸಂಸ್ಥೆಗಳಿಂದ ಅವರ ಬ್ಯಾಂಕ್ ಖಾತೆಗಳಿಗೆ ಠೇವಣಿ ಇಡಲು 2,000 ರೂ. ನೋಟುಗಳನ್ನು ಸ್ವೀಕರಿಸುತ್ತಿವೆ.
Advertisement