

ಚೆನ್ನೈ: ಜಿಎಸ್ ಟಿ ಕಡಿತದ ಪರಿಣಾಮವಾಗಿ ದೇಶದಲ್ಲಿ ಆಹಾರ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಭಾರತದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ 2025 ರಲ್ಲಿ ರಲ್ಲಿ ಶೇ. 0.25ಕ್ಕೆ ತೀವ್ರವಾಗಿ ಕುಸಿದಿದೆ. ಇದು ಕಳೆದ 10 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಹಣದುಬ್ಬರವಾಗಿದೆ.
ಸೆಪ್ಟೆಂಬರ್‌ನಲ್ಲಿ ಶೇ. 1.54 ಇದ್ದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ನಲ್ಲಿ ಕೇವಲ ಶೇ. 0.25 ದಾಖಲಾಗಿದೆ. ಪ್ರಸ್ತುತ ಗ್ರಾಹಕ ಬೆಲೆ ಸೂಚ್ಯಂಕ(CPI) ಸರಣಿಯಲ್ಲಿ ಇದು ಅತ್ಯಂತ ಕಡಿಮೆ ಮಟ್ಟವನ್ನು ಗುರುತಿಸಿದೆ.
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ(MoSPI) ಮಾಹಿತಿಯ ಪ್ರಕಾರ, ಆಹಾರವಸ್ತುಗಳ ಬೆಲೆಗಳು ಭರ್ಜರಿ ಇಳಿಕೆಯಾಗಿರುವುದು ಹಣದುಬ್ಬರ ಕುಸಿತಕ್ಕೆ ಕಾರಣವಾಗಿದೆ. ಆಹಾರ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಮೈನಸ್ ಶೇ. 2.33 ಇದ್ದದ್ದು ಈಗ ಮೈನಸ್ 5.02ಕ್ಕೆ ಕುಸಿದಿದೆ.
ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ ತರಕಾರಿ, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಬೆಲೆಗಳು ಗಮನಾರ್ಹ ಕುಸಿತವನ್ನು ದಾಖಲಿಸಿವೆ. ಅಲ್ಲದೆ ಸೆಪ್ಟೆಂಬರ್ ಅಂತ್ಯದಲ್ಲಿ ಜಾರಿಗೆ ತರಲಾದ ಜಿಎಸ್‌ಟಿ ದರ ಕಡಿತ ಸಹ ಹಣದುಬ್ಬರ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಇನ್ನು ರಾಜ್ಯಗಳ ಪೈಕಿ ಕೇರಳದಲ್ಲಿ ಅತಿಹೆಚ್ಚು ಹಣದುಬ್ಬರ ದಾಖಲಾಗಿದೆ. ಈ ದಕ್ಷಿಣ ರಾಜ್ಯದಲ್ಲಿ ಹಣದುಬ್ಬರ ಬರೋಬ್ಬರಿ ಶೇ. 8.56 ಇದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕದಲ್ಲೂ ಶೇ. 2ಕ್ಕಿಂತಲೂ ಹೆಚ್ಚು ಹಣದುಬ್ಬರ ದಾಖಲಾಗಿದೆ. ಹಣದುಬ್ಬರ ಮೈನಸ್ ಹೊಂದಿರುವ ರಾಜ್ಯಗಳಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿವೆ.
Advertisement