
ನವದೆಹಲಿ: ಕೇಂದ್ರ ಸರ್ಕಾರ ಜಿಎಸ್ ಟಿ ದರ ಕಡಿತ ಮಾಡಿದ್ದರಿಂದ ಮಧ್ಯಮ ಹಾಗೂ ಬಡತನ ರೇಖೆಗಿಂತ ಮೇಲಿರುವ ಜನರಿಗೆ ತುಂಬಾ ಅನುಕೂಲಕರವಾಗಿದೆ. ಅದರಲ್ಲೂ ಸ್ವಂತ ಕಾರು ಖರೀದಿಸಲು ಕನಸು ಕಾಣುತ್ತಿದ್ದವರಿಗೆ ನನಸು ಮಾಡಿಕೊಳ್ಳುವ ಸುಸಂದರ್ಭ ಒದಗಿದೆ.
ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನಗಳನ್ನು ಖರೀದಿದಾರರಿಗೆ ವರ್ಗಾಯಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಮತ್ತು ಮಹೀಂದ್ರಾ & ಮಹೀಂದ್ರಾ ಶುಕ್ರವಾರ ಘೋಷಿಸಿದ ನಂತರ, ಹ್ಯುಂಡೈ ಮೋಟಾರ್ ಇಂಡಿಯಾ ಕೂಡ ಇದೇ ರೀತಿಯ ಘೋಷಣೆ ಮಾಡಿದೆ. ತನ್ನ ಗ್ರಾಹಕರಿಗೆ ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನವನ್ನು ವರ್ಗಾಯಿಸುವುದಾಗಿ ಹ್ಯುಂಡೈ ಮೋಟಾರ್ ಇಂಡಿಯಾ ಭಾನುವಾರ ಘೋಷಿಸಿದೆ.
ಹೊಸ ದರ ಸೆಪ್ಟೆಂಬರ್ 22 ರಿಂದ ಜಾರಿಗೆ
ಪ್ರಯಾಣಿಕ ಕಾರುಗಳ ಬೆಲೆಯನ್ನು ಗಮನಾರ್ಹವಾಗಿ ಕಡಿತ ಮಾಡಿದೆ. ಹೊಸ ಬೆಲೆಗಳು ಹಬ್ಬದ ಸೀಸನ್‌ಗೆ ಮುಂಚಿತವಾಗಿ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ. ಪರಿಷ್ಕೃತ ಬೆಲೆಯೊಂದಿಗೆ, ಹ್ಯುಂಡೈ ಕಾರುಗಳು ಮತ್ತು SUV ಗಳು ರೂ 2.4 ಲಕ್ಷದವರೆಗೆ ಅಗ್ಗವಾಗುತ್ತವೆ. ಹ್ಯುಂಡೈ ಟಕ್ಸನ್‌ನಲ್ಲಿ ಬೆಲೆಯಲ್ಲಿ ಅತ್ಯಂತ ಹೆಚ್ಚು ರೂ. 2,40,303 ಕಡಿತವಾಗಲಿದೆ. ಇತರ ಜನಪ್ರಿಯ ಮಾದರಿಗಳಾದ Grand i10 Nios, Aura, Exter, i20, ವೆನ್ಯೂ, ವೆರ್ನಾ, ಕ್ರೆಟಾ ಮತ್ತು ಅಲ್ಕಾಜರ್‌ಗಳು ಸಹ ಸುಮಾರು ರೂ. 60,000 ರೂ.ಗಳಿಂದ 1.2 ಲಕ್ಷದವರೆಗೆ ಗಣನೀಯ ಪ್ರಮಾಣದ ಕಡಿತವಾಗಲಿದೆ.
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅನ್ಸೂ ಕಿಮ್ ಮಾತನಾಡಿ, ಪ್ರಯಾಣಿಕ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವ ಸರ್ಕಾರದ ಕ್ರಮವನ್ನು ಕಂಪನಿಯು ಸ್ವಾಗತಿಸುತ್ತದೆ. ಪ್ರಯಾಣಿಕ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವ ಕೇಂದ್ರ ಸರ್ಕಾರದ ಪ್ರಗತಿಪರ ಮತ್ತು ದೂರದೃಷ್ಟಿಯ ಕ್ರಮವನ್ನು ನಾವು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇವೆ ಎಂದಿದ್ದಾರೆ.
ಜಿಎಸ್ ಟಿ ತೆರಿಗೆ ಸುಧಾರಣೆಯು ಆಟೋ ಉದ್ಯಮಕ್ಕೆ ಉತ್ತೇಜನವಾಗಿದೆ ಮತ್ತು ಲಕ್ಷಾಂತರ ಭಾರತೀಯರಿಗೆ ಕೈಗೆಟುಕುವ ದರದಲ್ಲಿ ಕಾರು ಖರೀದಿಸುವ ಒಂದು ಉತ್ತಮ ಹೆಜ್ಜೆಯಾಗಿದೆ. ಭಾರತದ ಬೆಳವಣಿಗೆಯ ಪ್ರಯಾಣವನ್ನು ಬೆಂಬಲಿಸಲು ಹ್ಯುಂಡೈ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
56 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಘೋಷಿಸಲಾದ ಜಿಎಸ್‌ಟಿ ಕಡಿತದ ಹಿನ್ನೆಲೆಯಲ್ಲಿ ಸಣ್ಣ ಕಾರುಗಳು ನಾಲ್ಕು ಮೀಟರ್‌ಗಿಂತ ಕಡಿಮೆ ಉದ್ದದ 1,200 ಸಿಸಿ ವರೆಗಿನ ಪೆಟ್ರೋಲ್ ಇಂಜಿನ್ ಅಥವಾ 1,500 ಸಿಸಿ ವರೆಗಿನ ಡೀಸೆಲ್ ಇಂಜಿನ್ ವುಳ್ಳ ಕಾರುಗಳಿಗೆ ಜಿಎಸ್ ಟಿ ಈ ಹಿಂದೆ ಇದ್ದ ಶೇ. 28 ರಿಂದ ಶೇ. 18 ಕ್ಕೆ ಬದಲಾಗಿದೆ. ಜಿಎಸ್‌ಟಿ 2.0 ಕಾರು ಖರೀದಿ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ ಆಟೋ ವಲಯದಲ್ಲಿ ಬೇಡಿಕೆಯನ್ನು ಹೆಚ್ಚಿಸುತ್ತವೆ ಎಂದು ಹ್ಯುಂಡೈ ಹೇಳಿದೆ.
Advertisement