
ವಾಷಿಂಗ್ಟನ್: ಎಲಾನ್ ಮಸ್ಕ್ (Elon musk) ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ಪಟ್ಟಕೇರಿದ್ದಾರೆ. ನಿನ್ನೆ ಕೆಲವು ಗಂಟೆಗಳ ಕಾಲ 2ನೇ ಸ್ಥಾನಕ್ಕೆ ಕುಸಿದು ಒರಾಕಲ್‌ನ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ (Larry ellison) ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ ದಿನದ ಅಂತ್ಯದ ವೇಳೆಗೆ, ಮಸ್ಕ್ ಮತ್ತೆ ನಂಬರ್-1 ಸ್ಥಾನವನ್ನು ಪಡೆದರು.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯವು ಬುಧವಾರದ ಅಂತ್ಯದ ವೇಳೆಗೆ 384.2 ಬಿಲಿಯನ್ ಡಾಲರ್ ತಲುಪಿತು. ಇದು ಲ್ಯಾರಿ ಎಲಿಸನ್ ಗಿಂತ ಸುಮಾರು 1 ಬಿಲಿಯನ್ ಡಾಲರ್ ಹೆಚ್ಚಾಗಿದ್ದು ಇದರೊಂದಿಗೆ, ಅವರು ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಗೆದ್ದರು.
ಬುಧವಾರ ಬೆಳಿಗ್ಗೆ ಒರಾಕಲ್‌ನ ಷೇರುಗಳು ತೀವ್ರವಾಗಿ ಜಿಗಿದವು. ಕಂಪನಿಯು AI ಮೂಲಸೌಕರ್ಯ ವ್ಯವಹಾರಕ್ಕೆ ಸಂಬಂಧಿಸಿದ ಬಲವಾದ ಗಳಿಕೆಯಿಂದ ಷೇರುಗಳು ಸುಮಾರು ಶೇಕಡ 43ರಷ್ಟು ಹೆಚ್ಚಾಗಿತ್ತು. ಅಂತಿಮವಾಗಿ ಶೇಕಡ 36 ರಷ್ಟಕ್ಕೆ ನಿಂತುಕೊಂಡಿತು. 1992ರ ನಂತರದ ಕಂಪನಿಯ ಅತಿದೊಡ್ಡ ಒಂದೇ ದಿನದ ಲಾಭ ಇದಾಗಿದೆ.
ಒರಾಕಲ್‌ನ ಷೇರು ಏರಿಕೆಯು ಲ್ಯಾರಿ ಎಲಿಸನ್ ಅವರ ನಿವ್ವಳ ಮೌಲ್ಯವನ್ನು 89 ಬಿಲಿಯನ್ ಡಾಲರ್ ನಿಂದ 383.2 ಬಿಲಿಯನ್ ಡಾಲರ್ ಗೆ ಹೆಚ್ಚಿಸಿದೆ. ದಿನದಲ್ಲಿ ಅವರ ಸಂಪತ್ತು 101 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಾಗಿದೆ. ಇದು ಬ್ಲೂಮ್‌ಬರ್ಗ್ ಸೂಚ್ಯಂಕದಲ್ಲಿ ಇದುವರೆಗಿನ ಅತಿದೊಡ್ಡ ಒಂದೇ ದಿನದ ಲಾಭವಾಗಿದೆ. ಈ ಏರಿಕೆಯಿಂದಾಗಿ, ಅವರು ಕೆಲವು ಗಂಟೆಗಳ ಕಾಲ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದರು. ಪ್ರಸ್ತುತ ಎಲಾನ್ ಮಸ್ಕ್ 436 ಬಿಲಿಯನ್ ಡಾಲರ್ ಹೊಂದಿದ್ದರೆ ಎರಡನೇ ಸ್ಥಾನದಲ್ಲಿರುವ ಲ್ಯಾರಿ ಎಲಿಸನ್ 387 ಬಿಲಿಯನ್ ಡಾಲರ್ ಹೊಂದಿದ್ದಾರೆ.
ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು 244 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಾಗಿ ಸುಮಾರು 922 ಬಿಲಿಯನ್ ಡಾಲರ್ ಗೆ ತಲುಪಿದೆ. ಒರಾಕಲ್ ಈಗ ಎಸ್ & ಪಿ 500 ಪಟ್ಟಿಯಲ್ಲಿ 13 ರಿಂದ 10ನೇ ಸ್ಥಾನಕ್ಕೆ ಏರಿದೆ. ಎಲಿ ಲಿಲ್ಲಿ, ವಾಲ್‌ಮಾರ್ಟ್ ಮತ್ತು ಜೆಪಿ ಮೋರ್ಗಾನ್‌ನಂತಹ ದೊಡ್ಡ ಕಂಪನಿಗಳನ್ನು ಹಿಂದಿಕ್ಕಿದೆ.
ಎಲಾನ್ ಮಸ್ಕ್ 2021ರಲ್ಲಿ ಮೊದಲ ಬಾರಿಗೆ ವಿಶ್ವದ ಅತ್ಯಂತ ಶ್ರೀಮಂತ ಎಂಬ ಬಿರುದನ್ನು ಸಾಧಿಸಿದರು. ಇದರ ನಂತರ ಮಸ್ಕ್ ರನ್ನು ಬರ್ನಾರ್ಡ್ ಅರ್ನಾಲ್ಟ್ ಮತ್ತು ಜೆಫ್ ಬೆಜೋಸ್ ಹಲವು ಬಾರಿ ಹಿಂದಿಕ್ಕಿದರು. ಆದರೆ ಈ ಬಾರಿ ಮಸ್ಕ್ ಲ್ಯಾರಿ ಎಲಿಸನ್ ಅವರನ್ನು ಹಿಂದಿಕ್ಕುವ ಮೂಲಕ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.
Advertisement