

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ಭಾರಿ ಅವ್ಯವಸ್ಥೆ ಉಂಟಾಗಿದ್ದಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋಗೆ 22.2 ಕೋಟಿ ರೂ. ದಂಡ ವಿಧಿಸಿದೆ ಮತ್ತು ಸರಿಪಡಿಸುವ ಕ್ರಮವನ್ನು ಖಚಿತಪಡಿಸಿಕೊಳ್ಳಲು 50 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ಒದಗಿಸುವಂತೆ ವಿಮಾನಯಾನ ಸಂಸ್ಥೆಗೆ ನಿರ್ದೇಶಿಸಿದೆ.
68 ದಿನಗಳವರೆಗೆ ವಿಮಾನಯಾನ ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಇಂಡಿಗೋಗೆ ಭಾರಿ ದಂಡ ವಿಧಿಸಲಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ ರಚಿಸಿದ್ದ ನಾಲ್ವರು ಸದಸ್ಯರ ತನಿಖಾ ಸಮಿತಿಯು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಿದ ವರದಿಯನ್ನು ಆಧರಿಸಿ ಡಿಜಿಸಿಎ ಈ ಕ್ರಮ ತೆಗೆದುಕೊಂಡಿದೆ.
ಡಿಸೆಂಬರ್ 3 ಮತ್ತು 5 ರ ನಡುವೆ 2,507 ವಿಮಾನಗಳು ರದ್ದಾಗಿದ್ದು, 1,852 ವಿಮಾನಗಳು ವಿಳಂಬವಾಗಿ ದೇಶಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಮೇಲೆ ಪರಿಣಾಮ ಬೀರಿತ್ತು. ದೊಡ್ಡ ಪ್ರಮಾಣದ ವಿಮಾನ ರದ್ದತಿ ಮತ್ತು ವಿಳಂಬಗಳನ್ನು ಪರಿಶೀಲಿಸುವ ಕಾರ್ಯವನ್ನು ಸಮಿತಿಗೆ ವಹಿಸಲಾಗಿತ್ತು.
ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯ ಸ್ಥಗಿತಕ್ಕೆ ನಾಲ್ಕು ಪ್ರಮುಖ ಕಾರಣಗಳನ್ನು ಸಮಿತಿ ಗುರುತಿಸಿದೆ: ಕಾರ್ಯಾಚರಣೆಗಳ ಅತಿಯಾದ ಆಪ್ಟಿಮೈಸೇಶನ್, ಅಸಮರ್ಪಕ ನಿಯಂತ್ರಕ ಸಿದ್ಧತೆ, ಸಿಸ್ಟಮ್ ಸಾಫ್ಟ್‌ವೇರ್ ಬೆಂಬಲದಲ್ಲಿನ ನ್ಯೂನತೆಗಳು ಮತ್ತು ನಿರ್ವಹಣೆ ಹಾಗೂ ಕಾರ್ಯಾಚರಣೆಯ ನಿಯಂತ್ರಣದಲ್ಲಿನ ವೈಫಲ್ಯಗಳು.
ಮುಂದೆ ಈ ರೀತಿಯ ಘಟನೆಗಳನ್ನು ತಡೆಗಟ್ಟಲು ದೀರ್ಘಕಾಲೀನ ಸುಧಾರಣೆಗಳನ್ನು ಶಿಫಾರಸು ಮಾಡಿರುವ ಸಮಿತಿ, "ಸಮತೋಲಿತ ಕಾರ್ಯಾಚರಣೆ ಯೋಜನೆ, ದೃಢವಾದ ನಿಯಂತ್ರಕ ಸಿದ್ಧತೆ, ಸುಸ್ಥಿರ ಕಾರ್ಯಾಚರಣೆ, ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ನಿರ್ವಹಣಾ ಮೇಲ್ವಿಚಾರಣೆಯ ಅಗತ್ಯವನ್ನು ಒತ್ತಿಹೇಳಿದೆ".
Advertisement