ಡಾಲರ್ ಎದುರು ಪುಟಿದೆದ್ದ ರೂಪಾಯಿ: ಈ ವರ್ಷದಲ್ಲೇ ಮಹಾ ಪತನ; ಮುಂದಿನ ದಿನಗಳಲ್ಲಿ ಚಿನ್ನ- ಬೆಳ್ಳಿ ಬೆಲೆ ಮತ್ತಷ್ಟು ಕುಸಿತ!

ಭಾರತದಲ್ಲಿ ಮಂಗಳವಾರ ಚಿನ್ನದ ಬೆಲೆ ಸತತ ಆರನೇ ದಿನವೂ ಇಳಿಕೆ ಕಂಡಿದೆ. ಮತ್ತೊಂದೆಡೆ, ಬೆಳ್ಳಿ ದರವು ಒಂದೇ ದಿನ ಶೇಕಡಾ 5ರಷ್ಟು ಕುಸಿತ ಕಂಡು, ಕಳೆದ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದೆ.
Gold
ಚಿನ್ನOnline Desk
Updated on: 

ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಬೆಲೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ದೇಶದ ಚಿನಿವಾರ ಪೇಟೆಯಲ್ಲೂ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಈ ಲೋಹಗಳ ದರ ಕಡಿಮೆ ಆಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಮದುವೆ ಸೀಸನ್​ ಆರಂಭವಾಗಲಿದ್ದು ಚಿನ್ನ, ಬೆಳ್ಳಿ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಇಲ್ಲಿದೆ. ದೀಪಾವಳಿ ಮುಗಿದ ಬೆನ್ನಲ್ಲೇ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಮಂದ ಪ್ರವೃತ್ತಿ ಮತ್ತು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಬಲಗೊಂಡಿರುವ ಪರಿಣಾಮ, ಭಾರತದಲ್ಲಿ ಮಂಗಳವಾರ ಚಿನ್ನದ ಬೆಲೆ ಸತತ ಆರನೇ ದಿನವೂ ಇಳಿಕೆ ಕಂಡಿದೆ. ಮತ್ತೊಂದೆಡೆ, ಬೆಳ್ಳಿ ದರವು ಒಂದೇ ದಿನ ಶೇಕಡಾ 5ರಷ್ಟು ಕುಸಿತ ಕಂಡು, ಕಳೆದ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಆಲ್ ಇಂಡಿಯಾ ಸರಫಾ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, 99.9 ಪ್ರತಿಶತ ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,400 ರೂಪಾಯಿ ಇಳಿಕೆಯಾಗಿದೆ. ಸೋಮವಾರ 1,40,000 ರೂಪಾಯಿಯಷ್ಟಿದ್ದ ದರ ಮಂಗಳವಾರ 1,38,600 ರೂಪಾಯಿಗೆ ಬಂದು ನಿಂತಿದೆ. ನವೆಂಬರ್ 9 ರಿಂದ ಇಲ್ಲಿಯವರೆಗೆ ಚಿನ್ನದ ದರದಲ್ಲಿ ಬರೋಬ್ಬರಿ 8,300 ರೂಪಾಯಿ (ಸುಮಾರು ಶೇ. 6ರಷ್ಟು) ಕಡಿತವಾಗಿರುವುದು ಗಮನಾರ್ಹ ಸಂಗತಿಯಾಗಿದೆ.

Gold
ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಸತತ 4 ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!

ಬೆಳ್ಳಿಯ ಮೇಲೂ ಮಾರಾಟದ ಒತ್ತಡ ತೀವ್ರಗೊಂಡಿದ್ದು, ಒಂದೇ ದಿನ ಪ್ರತಿ ಕೆಜಿಗೆ 9,500 ರೂಪಾಯಿ (ಶೇ. 5.3) ಕುಸಿತ ಕಂಡಿದೆ. ಸೋಮವಾರ 1,79,000 ರೂಪಾಯಿಯಷ್ಟಿದ್ದ ಬೆಳ್ಳಿ ದರ ಮಂಗಳವಾರ 1,69,500 ರೂಪಾಯಿಗೆ ಇಳಿದಿದೆ. ನವೆಂಬರ್ 5 ರಿಂದ ಕಳೆದ ಎಂಟು ದಿನಗಳಲ್ಲಿ ಬೆಳ್ಳಿ ಬರೋಬ್ಬರಿ 25,000 ರೂಪಾಯಿ (ಶೇ. 13ರಷ್ಟು) ಅಗ್ಗವಾಗಿದೆ.

ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 43 ಪೈಸೆ ಏರಿಕೆ ಕಂಡು, 7 ತಿಂಗಳ ಗರಿಷ್ಠ ಮಟ್ಟ 93.51ಕ್ಕೆ ತಲುಪಿದೆ. ಕಚ್ಚಾತೈಲ ಬೆಲೆ ಇಳಿಕೆ, ದೇಶೀಯ ಷೇರುಪೇಟೆಗಳ ಚೇತರಿಕೆ ಮತ್ತು ವಿದೇಶಿ ಹೂಡಿಕೆಯ ನಿರಂತರ ಒಳಹರಿವು ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಕಾರಣವಾಗಿದೆ. ವಿದೇಶ ಬಂಡವಾಳ ಒಳಹರಿವು, ಕಚ್ಚಾತೈಲ ಬೆಲೆ ಇಳಿಕೆಯು ರೂಪಾಯಿ ಮೌಲ್ಯ ಹೆಚ್ಚಳಕ್ಕೆ ನೆರವಾಗಿದೆ. ಅಮೆರಿಕ ಡಾಲರ್ ಬೇಡಿಕೆ ಹೆಚ್ಚಿರುವುದು ಮುಂಬರುವ ದಿನಗಳಲ್ಲಿ ಅಪಾಯ ತಂದೊಡ್ಡಬಹುದು ಎಂದು ವಿದೇಶಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ದೇಶೀಯ ಮಾರುಕಟ್ಟೆಯಲ್ಲಿ ಆಮದು ವೆಚ್ಚ ತಗ್ಗಿ ಚಿನ್ನ-ಬೆಳ್ಳಿ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಇಳಿಕೆ ಸಾಧ್ಯತೆಯಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಹೀಗಾಗಿ ಚಿನ್ನ ಖರೀದಿ ಮಾಡಲು ಮತ್ತಷ್ಟು ಸಮಯ ಕಾಯುವುದು ಉತ್ತಮ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 3,856.61 ಡಾಲರ್‌ನಲ್ಲಿ ಸ್ಥಿರವಾಗಿದ್ದರೆ, ಬೆಳ್ಳಿ ಶೇ. 1ರಷ್ಟು ಚೇತರಿಸಿಕೊಂಡು 47.44 ಡಾಲರ್‌ಗೆ ತಲುಪಿದೆ. ಆದಾಗ್ಯೂ, ಜನವರಿಯ ದಾಖಲೆಯ ಗರಿಷ್ಠ ಮಟ್ಟವಾದ 5,602 ಡಾಲರ್​ಗೆ ಹೋಲಿಸಿದರೆ ಚಿನ್ನ ಸುಮಾರು ಶೇ. 31.5ರಷ್ಟು ಕುಸಿದಿದ್ದು, 2015 ರ ನಂತರದ ಅತ್ಯಂತ ಕಳಪೆ ವರ್ಷದತ್ತ ಸಾಗುತ್ತಿದೆ ಎಂದು ಜಾಗತಿಕ ತಜ್ಞರೊಬ್ಬರು ವಿಶ್ಲೇಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X