ಖಾದಿ ಕಾಲ

ಸಿನಿಮಾಕ್ಕೂ ರಾಜಕೀಯಕ್ಕೂ ಸಿಕ್ಕಾಪಟ್ಟೆ ಲಿಂಕು. ಒಂದು ಪೋಸ್ಟರ್‌ನಲ್ಲಿ ಪ್ರಚಾರ...
ಖಾದಿ ಕಾಲ
Updated on: 

ಸಿನಿಮಾಕ್ಕೂ ರಾಜಕೀಯಕ್ಕೂ ಸಿಕ್ಕಾಪಟ್ಟೆ ಲಿಂಕು. ಒಂದು ಪೋಸ್ಟರ್‌ನಲ್ಲಿ ಪ್ರಚಾರ ಗಿಟ್ಟಿಸಿಕೊಂಡರೆ, ಇನ್ನೊಂದರ ಪ್ರಚಾರಕ್ಕೆ ಬ್ಯಾನರ್ ಬೇಕು. ಈಗಂತೂ ಮುಂದೆ ರಾಜಕೀಯಕ್ಕೆ ಹೋಗಲೆಂದೇ ಸಿನಿಮಾರಂಗಕ್ಕೆ ಕಾಲಿಡುವವರ ಸಂಖ್ಯೆ ಹೆಚ್ಚಿದೆ. ಇನ್ನೊಂದೆಡೆ ರಾಜ್ಯದಲ್ಲಿ ಕುರ್ಚಿಗಾಗಿ ನಡೆಸುವ ಕಸರತ್ತುಗಳೇ ಸಿನಿಮಾ ರೀತಿ ಇರುತ್ತವೆ.
ಬಿಡಿ, ಇವೆಲ್ಲವನ್ನೂ ಸೈಡಿಗೆ ಹಾಕಿ ಇನ್ನು ರೀಲೊಳಗಿನ ರಾಜಕೀಯ ನೋಡೋಣ. ಈಗ ಖಾಕಿ, ಕಾವಿ ಮತ್ತು ಪೊಲೀಸ್ ಈ ಮೂರು ಅಂಶಳನ್ನೊಳಗೊಂಡ ಚಿತ್ರಗಳಿಗೆ ಲೆಕ್ಕವಿಲ್ಲ. ಆದರೆ, ಹಿಂದೆ ರಾಜಕೀಯ ಚಿತ್ರಗಳದ್ದೇ ಭರಾಟೆ ಜೋರಾಗಿತ್ತು. ಖಾದಿಗಳ ಅಸಲಿ ಮುಖವಾಡಗಳನ್ನು ಬೆತ್ತಲೆ ಮಾಡಿ, ವೀಕ್ಷಕನಿಗೆ ಆಪ್ತವಾದ ಚಿತ್ರಗಳು ಹತ್ತಾರು. 80ರ ದಶಕದಿಂದೀಚೆಗೆ ಇಂಥ ಚಿತ್ರಗಳು ತೆರೆಕಂಡವು. ರಾಜೇಂದ್ರಸಿಂಗ್ ಬಾಬು ನಿರ್ದೇಶನದ 'ಅಂತ' ಈ ನಿಟ್ಟಿನಲ್ಲಿ ಮೊದಲ ಪ್ರಯತ್ನ.
ಆದರೆ, ರೆಬೆಲ್‌ಸ್ಟಾರ್ ಅಂಬರೀಷ್ 'ಅಂತ', ಉಪೇಂದ್ರ ನಿರ್ದೇಶನದ 'ಆಪರೇಷನ್ ಅಂತ' ಹಾಗೂ ವಿ. ಸೋಮಶೇಖರ್ ನಿರ್ದೇಶನದ 'ಚಕ್ರವ್ಯೂಹ' ಚಿತ್ರಗಳ ನಂತರ ರಾಜಕೀಯ ಕಥೆಗಳನ್ನೊಳಗೊಂಡ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅಲ್ಲಿ 'ರೆಬೆಲ್‌ನೆಸ್‌' ಇರಲಿಲ್ಲ. ವಿಜಯಾರೆಡ್ಡಿ, ವಿ. ಸೋಮಶೇಖರ್, ರಾಜೇಂದ್ರಸಿಂಗ್ ಬಾಬು ಅವರಂತೆಯೇ ರಾಜಕೀಯವನ್ನು ದಿಟ್ಟವಾಗಿ ತೆರೆಗೆ ತಂದ ಮತ್ತೊಬ್ಬ ನಿರ್ದೇಶಕರೆಂದರೆ ಶಿವಮಣಿ.
ಶಿವಮಣಿ ನಿರ್ದೇಶನದಲ್ಲಿ ಬಂದ 'ರಾಜಕೀಯ', 'ಗೋಲಿಬಾರ್‌', 'ಶಿವಸೈನ್ಯ' ಈ ಮೂರು ಚಿತ್ರಗಳೂ ರಾಜಕೀಯ ಕರ್ಮಗಳನ್ನು ಪ್ರೇಕ್ಷಕನ ಮುಂದಿಟ್ಟವು. 'ನನಗೆ ಮೊದಲಿನಿಂದಲೂ ರಾಜಕೀಯದ ಬಗ್ಗೆ ಆಕರ್ಷಣೆ ಇತ್ತು. ಇಂಥ ಸನ್ನಿವೇಶಗಳನ್ನೊಳಗೊಂಡ ಚಿತ್ರಗಳನ್ನು ನೋಡುತ್ತಿದ್ದಾಗ ಥ್ರಿಲ್ ಆಗುತ್ತಿದ್ದೆ. 'ಅಂತ' ಚಿತ್ರ ಕೂಡ ನನ್ನನ್ನು ಹೆಚ್ಚು ಪ್ರಭಾವಿಸಿತು. ನಿರ್ದೇಶಕನಾದ ಮೇಲೆ ನನ್ನ ಮೊದಲ ಚಿತ್ರವೇ ರಾಜಕೀಯ ಕಥೆಯನ್ನು ಹೇಳುವ ಸಿನಿಮಾ ಆಗಿತ್ತು. ಆಗ ಯೂತ್ ಐಕಾನ್ ಆಗಿದ್ದ ಶಿವಣ್ಣನ ಜೊತೆ 'ಶಿವಸೈನ್ಯ' ಚಿತ್ರ ಮಾಡಲು ಅಸ್ಸಾಂನ ಪ್ರಫುಲ್ಲ ಕುಮಾರ್ ಮಹಾಂತ್ ಪ್ರೇರಣೆಯಾಗಿದ್ದರು. ವಿದ್ಯಾರ್ಥಿ ಚಳುವಳಿಯಿಂದ ಬಂದ ಪ್ರಫುಲ್ಲ ಕುಮಾರ್, ಅತಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರವೇಶಿಸಿ ಸಚಿವರಾದವರು. ಆಗ ಅವರ ಹಿಂದಿದ್ದ ಶಕ್ತಿ ಯುವಜನಾಂಗ. ಆತನ ಜೀವನವನ್ನು 'ಶಿವಸೈನ್ಯ' ಚಿತ್ರದಲ್ಲಿ ಹೇಳಿದೆ.
ಅಬ್ದುಲ್ ರಶೀದ್ ಕೊಲೆ ಪ್ರಕರಣ ನಡೆದಾಗ 'ರಾಜಕೀಯ', ಗೋಲಿಬಾರ್ ಪ್ರಕರಣ ನಡೆದಾಗ 'ಗೋಲಿಬಾರ್‌' ಹೆಸರಿನಲ್ಲೇ ಚಿತ್ರ ಮಾಡಿದೆ' ಎನ್ನುತ್ತಾರೆ ನಿರ್ದೇಶಕ ಶಿವಮಣಿ.
ಈ ಚಿತ್ರಗಳ ಹೊರತಾಗಿಯೂ 'ಆಸ್ಫೋಟ', 'ಚಿತೆಗೂ ಚಿಂತೆ', 'ಬರ', ಮರಾಠಿಯಿಂದ ರಿಮೇಕ್ ಆದ 'ಸಿಂಹಾಸನ', 'ಸಂಕ್ರಾಂತಿ' ಮುಂತಾದ ಚಿತ್ರಗಳೂ ರಾಜಕೀಯದ ಬಣ್ಣ ಬಳಿದುಕೊಂಡಿದ್ದವು. ಇತ್ತೀಚೆಗೆ ಸುಮನಾ ಕಿತ್ತೂರು ನಿರ್ದೇಶನದಲ್ಲಿ 'ಕಳ್ಳರ ಸಂತೆ' ಚಿತ್ರವೂ ಖಾದಿಗಳ ಬಣಕ್ಕೆ ಕನ್ನಡಿ ಹಿಡಿಯುವ ಕೆಲಸ ಮಾಡಿತು. ಹಾಗೆ ನೋಡಿದರೆ 'ಅಂತ' ಚಿತ್ರಕ್ಕೂ ಹಿಂದೆ ರಾಜಕೀಯ ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗವನ್ನು ಪ್ರವೇಶಿಸಿತ್ತು. 'ಅಂತ' ಚಿತ್ರ ರಾಜಕೀಯ ಸಿನಿಮಾಗಳಿಗೆ ಹೊಸ ತಿರುವು ಕೊಟ್ಟಿತು.
80ರ ದಶಕದಲ್ಲಿ ಚಲನಚಿತ್ರಗಳಲ್ಲಿ ಮಿಂಚಿದ 'ಖಾದಿ' ಕ್ರಮೇಣ ಕಾಲ್‌ಕಿತ್ತಿದ್ದಕ್ಕೆ ಕಾರಣ ಸಿಕ್ಕುವುದಿಲ್ಲ. ಚಿತ್ರರಂಗದಲ್ಲಿ 'ಖಾದಿ ಖದರ್‌' ಹೆಚ್ಚು ಮುಂದುವರಿಯಲಿಲ್ಲ. ಹಿಂದಿಯ 'ರಾಜ್‌ನೀತಿ', 'ಶಾಂಘೈ', ತಮಿಳಿನಲ್ಲಿ 'ಶಕುನಿ', ತೆಲುಗಿನಲ್ಲಿ 'ಲೀಡರ್‌' ಮುಂತಾದ ರಾಜಕೀಯ ಕದನ ಚಿತ್ರಗಳು ಅಪರೂಪಕ್ಕಾದರೂ ಬೇರೆ ಭಾಷೆಗಳಲ್ಲಿ ಬರುತ್ತಿವೆ. ಆದರೆ, ಕನ್ನಡ ಚಿತ್ರರಂಗ ಹಿಂದಿನಂತೆ ರಾಜಕೀಯವನ್ನು ಈಗ ಹೆಚ್ಚು ನೆಚ್ಚಿಕೊಂಡಿಲ್ಲ. ಒಂದೆರಡು ಪಾತ್ರಗಳು ಬಂದುಹೋಗುತ್ತವಷ್ಟೇ. ರೀಲ್‌ನಲ್ಲಿ ಮಹತ್ವ ಕಳೆದುಕೊಳ್ಳುತ್ತಿರುವ ರಾಜಕೀಯ, ರಿಯಲ್‌ನಲ್ಲೂ ತನ್ನ ರೇಟು ಹಾಳುಮಾಡಿಕೊಂಡಿದೆ. ಪ್ರಸಕ್ತ ರಾಜ ಕೀಯ ರೇಜಿಗೆ ಹುಟ್ಟಿಸು ತ್ತಿರುವುದರಿಂದ ಯಾವ ನಿರ್ದೇಶಕರಿಗೂ ಆ ಟಾಪಿಕ್ ಬೇಡವಾಗಿದೆ. ಒಟ್ಟಿನಲ್ಲಿ ಬಿಳಿಗೂ, ಬೆಳ್ಳಿಪರದೆಗೂ ಆಗಿಬರುವುದಿಲ್ಲ ಅಂತ ಕಾಣುತ್ತದೆ.
ಈ ನಾಟಕ ಭಾಷಾತೀತ
ರಾಜಕೀಯ ಅಖಾಡ ಭಾಷಾತೀತ. ಪ್ರಕಾಶ್ ಜಾ, ಸುಧೀರ್ ಮಿಶ್ರಾ, ರಾಮ್‌ಗೋಪಾಲ್ ವರ್ಮಾ, ದಾಸರಿ ನಾರಾಯಣರಾವ್, ನಾರಾಯಣಮೂರ್ತಿ, ಶೇಖರ್ ಕಮ್ಮಲು, ಕೆ. ಬಾಲಚಂದರ್ ಮುಂತಾದವರು ರಾಜಕೀಯ ದೊಂಬರಾಟಗಳಿಗೆ ಸಾಧ್ಯವಾದಷ್ಟು ಕ್ಯಾಮೆರಾ ಹಿಡಿದಿದ್ದಾರೆ. 'ಆರಕ್ಷಣ್‌', 'ರಾಜ್‌ನೀತಿ', 'ಸರ್ಕಾರ್‌', 'ಶಾಂಘೈ', 'ನಾಯಕ್‌', 'ನ್ಯೂ ಡೆಲ್ಲಿ ಟೈಮ್ಸ್‌', 'ಗುಲಾಲ್‌', 'ಆನಂದಿ' ಮುಂತಾದ ಚಿತ್ರಗಳಲ್ಲಿ ರಾಜಕೀಯದ ಧಮ್ಮಿದೆ. ಕೆ. ಬಾಲಚಂದರ್ 'ತಣ್ಣೀರ್ ತಣ್ಣೀರ್‌' ಚಿತ್ರದಲ್ಲಿ ನೀರಿನ ಅಭಾವದ ಹಿನ್ನೆಲೆಯಲ್ಲಿ ಹೇಳುವ ರಾಜಕೀಯದ ನಾಟಕವನ್ನು ಮರೆಯಲಾದೀತೆ? ತೆಲುಗಿನ 'ಪ್ರತಿಘಟನಾ', 'ಕರ್ತವ್ಯಂ', 'ಪ್ರಸ್ಥಾನಂ', 'ಧರವು', 'ಲೀಡರ್‌', 'ಓಸೆ ರಾಮುಲಮ್ಮ'... ಹೀಗೆ ಹಲವು ಚಿತ್ರಗಳು ಮೂಡಿಬಂದಿವೆ.
ಶೇಖರ್ ಕಮ್ಮಲು ನಿರ್ದೇಶನದಲ್ಲಿ ಬಂದ 'ಲೀಡರ್‌' ಚಿತ್ರ ಸಾಕಷ್ಟು ಸುದ್ದಿ ಮಾಡಿತು. ವಿದ್ಯಾವಂತ ಯುವಕರು ರಾಜಕೀಯಕ್ಕೆ ಬಂದರೆ ಏನಾಗಬಹುದು ಎನ್ನುವುದರ ಸುತ್ತ ಸಾಗುವ ಈ ಸಿನಿಮಾ ಎಂದೆಂದಿಗೂ ಪ್ರಸ್ತುತ. 'ನಾನು ಲಂಚ ತೆಗೆದುಕೊಳ್ಳದೆ ನಿಮ್ಮ ಸೇವೆ ಮಾಡುತ್ತೇನೆ. ನೀವೂ ಹಣ ತೆಗೆದುಕೊಳ್ಳದೆ ವೋಟ್ ಹಾಕುವ ಧೈರ್ಯ ತೋರಿಸುತ್ತೀರಾ' ಎನ್ನುವ ಯುವನಾಯಕನ ಮಾತು, 'ಒಂದು ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲಿಕ್ಕಾಗದ ಸಿಎಂ, ಇದ್ದರೆಷ್ಟು, ಬಿಟ್ಟರೆಷ್ಟು?' ಎಂದು ಮುಖ್ಯಮಂತ್ರಿ ಮುಖಕ್ಕೆ ಮಂಗಳಾರತಿ ಎತ್ತುವ ಅಸಹಾಯಕನ ವೇದನೆ...ಇದೇ ಚಿತ್ರವನ್ನು ಆಧರಿಸಿ ಕನ್ನಡದಲ್ಲೂ ಮಾಜಿ ಸಚಿವ ಶಿವರಾಜ್ ತಂಗಡಗಿ 'ರೆಡ್ಡಿ ಬೇಲು ಡೀಲು' ಚಿತ್ರ ಮಾಡುವುದಕ್ಕೆ ಹೊರಟಿದ್ದರು. ಅದರ ಬಗ್ಗೆ ಮತ್ತೆ ಸುದ್ದಿ ಇಲ್ಲ!

ರಾಜಿಯಾಗಿದ್ದೇವೆ
ರಾಜಕೀಯ ವಿಷಯದ ಸಿನಿಮಾ ಜನ ನೋಡಲ್ಲ ಎನ್ನಲಾಗದು. ಆದರೆ ಅಂಥ ಚಿತ್ರಗಳನ್ನು ಮಾಡುವ ಜನ ಆಸಕ್ತಿ ಕಳೆದುಕೊಂಡಿದ್ದಾರೆ, ರಾಜಕೀಯದ ಬಗ್ಗೆ ಆಳ ತಿಳಿವಳಿಕೆ ಇಲ್ಲ, ಆಗಿನಂತೆ ಈಗ ಗಟ್ಟಿ ಪಾತ್ರಗಳಿಲ್ಲ... ಇಂಥ ಕೆಲವು ಕಾರಣಗಳಿಂದ ಈಗ ರಾಜಕೀಯ ಸಿನಿಮಾಗಳಲ್ಲಿ ತನ್ನ ಮಹತ್ವ ಕಳೆದುಕೊಂಡಿರುವುದು ನಿಜ. ಅಲ್ಲದೆ ಈಗ ರಾಜಕೀಯ ಸೂಕ್ಷ್ಮವಾಗಿಲ್ಲ. ಗಬ್ಬು ನಾರುತ್ತಿದೆ. ನಿಜವಾಗಲೂ ರಾಜಕೀಯ ಸಿನಿಮಾ ಪರಿಣಾಮಕಾರಿಯಾಗಿ ಬರಬೇಕಾದ ಕಾಲಘಟ್ಟವಿದು. ಆದರೆ ನಾವು ರಾಜಕೀಯದ ಜೊತೆ ರಾಜಿಯಾಗಿದ್ದೇವೆ. -ಮುಖ್ಯಮಂತ್ರಿ ಚಂದ್ರು.

ರಾಜಕೀಯವೇ ಚೀಪ್!
ರಾಜಕೀಯ ಕಥೆಗಳನ್ನಾಧರಿಸಿದ ಚಿತ್ರಗಳಲ್ಲಿ ಕ್ವಾಲಿಟಿ ಇರೋದಿಲ್ಲ. ಬಿಳಿ ಬಟ್ಟೆ ಹಾಕಿದವರನ್ನೆಲ್ಲ ರಾಜಕಾರಣಿಗಳು ಎಂದು ತೋರಿಸುತ್ತಿದ್ದೇವೆ. ನಿರೂಪಣೆಯಲ್ಲಿ ಹೊಸತನವಿಲ್ಲ. ರಾಜಕೀಯ ವಿಷಯವನ್ನು ತುಂಬಾ ಚೀಪ್ ಮಾಡಿ ಬಿಟ್ಟಿದ್ದೇವೆ. ಮತ್ತೊಂದೆಡೆ ರಾಜಕೀಯ ಎಂದರೆ ಜನಕ್ಕೆ ವಾಕರಿಕೆ. 'ಅಂತ' ಸಿನಿಮಾ ಮಾಡುವ ಕಾಲದ ಪರಿಸ್ಥಿತಿ ಬೇರೆಯೇ ಇತ್ತು.  - ರಾಜೇಂದ್ರಸಿಂಗ್ ಬಾಬು.

ಪಾತ್ರಗಳು ಕ್ಲೀಷೆ
ಈಗ ಜನಕ್ಕೆ ರಾಜಕಾರಣಿಗಳ ಆಟಗಳ ಬಗ್ಗೆ ಆಸಕ್ತಿ ಇಲ್ಲ. ಜೊತೆಗೆ 'ನಾವು ನಿಮ್ಮ ಸೇವಕರು' ಎಂದು ಹೇಳಿಕೊಳ್ಳುವ ಜನನಾಯಕರ ಎಲ್ಲ ಮುಖಗಳೂ ನಿತ್ಯ ಮಾಧ್ಯಮಗಳಲ್ಲಿ ಬೆತ್ತಲೆಯಾಗುತ್ತಿದೆ. ಖಾದಿಯಲ್ಲಿ ಯಾವ ರಹಸ್ಯ ಮತ್ತು ಕುತೂಹಲವೂ ಉಳಿದಿಲ್ಲ. ರಾಜಕೀಯದ ಮೇಲೆ ಹಿಂದಿದ್ದ ಅಸಕ್ತಿ ಈಗಿಲ್ಲ. ನಾವೀಗ ಸೃಷ್ಟಿಸುತ್ತಿರುವ ರಾಜಕೀಯ ಪಾತ್ರಗಳು ಕ್ಲೀಷೆಯಾಗಿ ಕಾಣುತ್ತಿವೆ.  - ಶಿವಮಣಿ

-ಆರ್.ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com