

ಸಿನಿಮಾರಂಗಕ್ಕೆ ಕಾಲಿಟ್ಟ ಹೊಸದರಲ್ಲಿ ನಟಿಯರು ಪತ್ರಿಕಾಗೋಷ್ಟಿಗಳಲ್ಲಿ, ಶೂಟಿಂಗ್ ಸಮಯದ ಮಾಧ್ಯಮಗಳೊಂದಿಗಿನ ಭೇಟಿಗಳಲ್ಲಿ ಛಾಯಾಗ್ರಾಹಕರ ಹಿಂದೆ ಮುಂದೆ ಸುತ್ತುವುದೇ ಹೆಚ್ಚು. ನಮ್ಮದೊಂದು ಚೆಂದನೆಯ ಪೋಟೋ ತೆಗೆಯಲಿ ಎಂಬ ಆಸೆಯಿಂದ. ಆದರೆ ಇವತ್ತು ಕಾಲ ಬದಲಾಗಿದೆ. ತಮ್ಮ ಪೋಟೋ ತೆಗೆದ ಛಾಯಾಗ್ರಾಹಕನ ಮೇಲೆ ಪೊಲೀಸ್ ದೂರು ನೀಡುವಷ್ಟರ ಮಟ್ಟಿಗೆ. ಆಕೆ ಇಂದು ಸ್ಟಾರ್ ಎಂಬುದು ಈ ಬದಲಾವಣೆಗೆ ಕಾರಣ. ಇಂಥ ಕಿರಿಕ್ ಕೇಸುಗಳನ್ನು ಹಾಕುವ 'ಕೆಪ್ಯಾಸಿಟಿ' ಇರುವುದು ರಮ್ಯಾ ಅವರಿಗೆ ಮಾತ್ರ ಬಿಡಿ.
ಆದರೆ ಗಾಂಧಿನಗರದಲ್ಲಿ ಕೆಲವು ದಿನಗಳಿಂದ ಇದೇ ಸುದ್ದಿ ಸದ್ದು ಮಾಡುತ್ತಿದೆ. 'ನೀರ್ದೋಸೆ' ಚಿತ್ರದ ಚಿತ್ರೀಕರಣದ ವೇಳೆ ತಮ್ಮ ಪೋಟೋ ತೆಗೆದ ಕಾರಣಕ್ಕೆ ಹಾಕಿದ ನಟಿ ರಮ್ಯಾ ಕೇಸು ಇದು. ಹಾಗಾಗಿ, ಆಹ್ವಾನದ ಮೇರೆಗೆ ಚಿತ್ರೀಕರಣದ ಸ್ಥಳಕ್ಕೆ ಹೋಗಿ ನಟಿಯೊಬ್ಬಳ ಪೋಟೋ ತೆಗೆದು, ಇದು ನಮಗೆ ಬೇಕಿತ್ತಾ
ಎಂದು ಕೇಳುವಂಥ ಪರಿಸ್ಥಿತಿ ಛಾಯಾಗ್ರಹಕ ಕೆ.ಎನ್. ನಾಗೇಶ್ಕುಮಾರ್ ಅವರದ್ದು.
ರಮ್ಯಾ ಅವರ ಪಾಲಿಗೆ ಇದು ಮತ್ತೊಂದು ಕಿರಿಕ್ಕು ಅಷ್ಟೆ. ಆದರೆ, ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್ರ ಕಾಲದಿಂದ ಇಲ್ಲಿಯವರೆಗಿನ ಎಲ್ಲ ಪೀಳಿಗೆಗಳನ್ನೂ ನೋಡಿರುವ ಈ ಹಿರಿಯ ಛಾಯಾಗ್ರಾಹಕರಿಗೆ ಈಗ ಪಾಪ ಏನೋ ತಪ್ಪು ಮಾಡಿದ್ದೇನೆಂಬ ಅಪರಾಧಿ ಭಾವ ಮೂಡಿಸುವಂಥ ನಾಚಿಕೆಗೇಡಿನ ಪರಿಸ್ಥಿತಿ ಇದು.
ಇಲ್ಲಿ ಕೇಸ್ ಸ್ಟಡಿ ಮಾಡಿದವರಿಗೆ, ರಮ್ಯಾ ಕೇಸು ಹಾಕುವಂಥ ತಪ್ಪನ್ನು ನಾಗೇಶ್ಕುಮಾರ್ ಮಾಡಿದ್ದಾರೆಯೇ ಎಂಬ ಪ್ರಶ್ನೆ ಸಹಜ. ರಮ್ಯಾ ಕೊಟ್ಟ ಕೇಸಿನಲ್ಲಿ ಅದ್ಯಾವ ಆಧಾರ ಇದೆ ಎಂಬುದು ಅದನ್ನು ಬರೆದುಕೊಂಡ ಆ ಕೇಸ್ ರೈಟರ್ಗೇ ಗೊತ್ತು. ಇಲ್ಲಿ ಒಬ್ಬರ ಮೇಲೆ ಕೇಸು ಹಾಕಲು ಕೊಡಬಹುದಾಗಿರುವ ಕಾರಣಗಳು ಎರಡು. ಒಂದು, ಅನುಮತಿ ಇಲ್ಲದೆ ಚಿತ್ರ ತೆಗೆಯುವುದು ತಪ್ಪು ನಿಜ. ಆದರೆ ಇಲ್ಲಿ ನಾಗೇಶ್ಕುಮಾರ್ ಚಿತ್ರತಂಡದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿ ತೆಗೆದ ಚಿತ್ರ ಅದು. ಇನ್ನೊಂದು ಕಾರಣ, ಈ ಪೋಟೋದಿಂದ ನನ್ನ ಮಾನ ಹಾನಿಯಾಗಿದೆ ಎಂಬುದು. ಈ ಛಾಯಾಗ್ರಾಹಕರು ನಟಿ ರಮ್ಯಾ ಮೇಕಪ್ ರೂಮಿನಲ್ಲೋ, ತಮ್ಮ ಕ್ಯಾರವಾನ್ನಲ್ಲೋ ಇದ್ದಾಗ ಅನ್ಫಿಶಿಯಲ್ 'ಕಾರವಾನ್' ನಡೆಸಿ ಪೋಟೋ ತೆಗೆದಿದ್ದರೆ ಈ ವಾದಕ್ಕೆ ಅರ್ಥ ಇರುತ್ತಿತ್ತು. ನಾಗೇಶ್ಕುಮಾರ್ ತೆಗೆದಿದ್ದು ರಮ್ಯಾ ಸಿನಿಮಾದ ಕ್ಯಾಮೆರಾಕ್ಕೆ ಕೊಟ್ಟ ಪೋಸನ್ನೇ. ಹಾಗಾಗಿ, ಆ ಕ್ಯಾಮರಾಕ್ಕೆ ಅಶ್ಲೀಲ ಎನಿಸದ್ದು, ಈ ಕ್ಯಾಮರಾಕ್ಕೆ ಅದು ಹೇಗೆ ಅಶ್ಲೀಲ ಎನಿಸಿತೋ ಈ ಕ್ಯಾಮೆರಾ ಕಂಡುಹಿಡಿದವನಿಗೇ ಗೊತ್ತು. ಇವೆರಡನ್ನು ಬಿಟ್ಟು ಆ ಕೇಸ್ ರೈಟರ್, ಸ್ಕ್ರಿಪ್ಟ್ ರೈಟರ್ ಥರಾ ಕ್ರಿಯೇಟಿವ್ ಆಗಿ ಯೋಚನೆ ಮಾಡಿದ್ದರೆ ಇನ್ಯಾವುದೋ ಹೊಸ ಕಾರಣಗಳನ್ನು ಹುಟ್ಟುಹಾಕಬಹುದಷ್ಟೆ. ಒಟ್ಟಿನಲ್ಲಿ ಈ ಎಲ್ಲ ಎಪಿಸೋಡ್ಗಳ ನಂತರ, 'ನಾವು ಕಾಲಕ್ಕೆ ತಕ್ಕಂತೆ ಫೋಟೋ ತೆಗೆಯಬೇಕು' ಎಂಬುದು ಸಿನಿಮಾ ಛಾಯಾಚಿತ್ರಗ್ರಾಹಕರ ಫೇವರೆಟ್ ಹಾಡಾಗಿರುವುದು ಮಾತ್ರ ಸುಳ್ಳಲ್ಲ.
-ಹ್ಯಾರಿ