ಜಟಾಯು ಸಾಹಸಕ್ಕೆ ಸಿದ್ಧ

ಜಟಾಯು ಸಾಹಸಕ್ಕೆ ಸಿದ್ಧ
Updated on: 

ಕಥೆಗಾರ ಜಯಂತ್ ಕಾಯ್ಕಿಣಿ ಲೇಖನಿಯಲ್ಲಿ ಮೂಡಿ ಬಂದ 'ಗಾಳಿಯೇ ನೋಡು ಬಾ ದೀಪದ ನರ್ತನ' ಹಾಡು ಯಾರಿಗೆ ನೆನಪಿಲ್ಲ ಹೇಳಿ? ತುಂಬಾ ಪಾಪ್ಯುಲರ್ ಆಗಿದ್ದ ಈ ಹಾಡು 'ಸಂಚಾರಿ' ಚಿತ್ರದ್ದು ಎಂಬುದನ್ನು ನೆನಪಿಸಿಬೇಕಿದೆ. ಯಾಕೆಂದರೆ ಹಾಡಿನಷ್ಟು ಚಿತ್ರಕ್ಕಾಗಲಿ, ಅದರ ನಾಯಕನಿಗಾಗಲಿ ಹೆಸರು ಬರಲಿಲ್ಲ. 'ಸಂಚಾರಿ' ಚಿತ್ರ ಒಂದಷ್ಟು ಸುದ್ದಿ ಮಾಡಿದ್ದು ಕೂಡ ಈ ಹಾಡಿನಿಂದಲೇ. ಆದರೆ ಚಿತ್ರದ ನಾಯಕ ರಾಜ್ ಮೊದಲ ಚಿತ್ರ ತನಗೆ ಹೆಸರು ತಂದುಕೊಡದಿದ್ದರೆ ಏನಂತೆ? ಮರಳಿ ಪ್ರಯತ್ನಿಸುವೆ ಎಂದು 'ಜಟಾಯು' ಮೇಲೇರಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸುರಭಿ ಹಾಗೂ ರೂಪಾಶ್ರೀ ಚಿತ್ರದ ನಾಯಕಿರು. ಇದೇ ತಿಂಗಳು 26ಕ್ಕೆ 'ಜಟಾಯು' ಚಿತ್ರ ಬಿಡುಗಡೆಯಾಗಲಿದೆ.
ಸಂಭ್ರದಿಂದಲೇ ಮಾಧ್ಯಮಗಳೆದುರು ಹಾಜರಾದ ರಾಜ್, ನಟನೆ ಜೊತೆಗೆ ನಿರ್ದೇಶಕನಾಗಿಯೂ 'ಜಟಾಯು' ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಚಿತ್ರಕ್ಕೆ ವಿನಯ್ ಚಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮುಂದಿನ ವಾರ ರಾಜ್ಯದ 100 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ನಿರೀಕ್ಷೆಯಂತೆ ಸಿನಿಮಾ ಮೂಡಿ ಬಂದಿದ್ದು, ಎಲ್ಲ ವರ್ಗದ ಪ್ರೇಕ್ಷಕರೂ ನೋಡುವಂಥ ಸಿನಿಮಾ ಇದು' ಎಂದು ಬಣ್ಣಿಸಿದರು. ಚಿತ್ರದ ನಿರ್ಮಾಣ ಹೊಣೆ ಪ್ರಭಾಕರ್ ಅವರದ್ದು. ಹಳ್ಳಿ ಕಥೆಯೊಂದಿಗೆ ಶುರುವಾಗುವ ಈ ಚಿತ್ರದಲ್ಲಿ ಸಾಹಸವೇ ಪ್ರಧಾನವಾಗಿದ್ದು, ಈಗಾಗಲೇ ಚಿತ್ರ ನೋಡಿದ ಚಿತ್ರರಂಗದ ಕೆಲ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.  ಅವಿನಾಶ್, ನಟರಾಜ್, ಪೆಟ್ರೋಲ್ ಪ್ರಸನ್ನ, ಬುಲೆಟ್ ಪ್ರಕಾಶ್, ಕಿಲ್ಲರ್ ವೆಂಕಟೇಶ್, ಡ್ಯಾನಿ, ಸತೀಶ್, ಕುರುಪ್ ರಮೇಶ್ ಮತ್ತಿತರರು ಅಭಿನಯಿಸಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದು, ಪಕ್ಕಾ ಮಾಸ್ ಮತ್ತು ಎಂಟರ್‌ಟೈನ್‌ಮೆಂಟ್ ಚಿತ್ರ ಎಂಬುದು ಚಿತ್ರತಂಡದ ಅಭಿಪ್ರಾಯ.   'ನಾನು ಈ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ' ಎಂಬುದು ನಾಯಕಿ ಸುರಭಿಯ ಮಾತು. ನಿರ್ಮಾಪಕ ಪ್ರಭಾಕರ್, ಥ್ರಿಲ್ಲರ್ ಮಂಜು ಸೇರಿದಂತೆ ಚಿತ್ರತಂಡದ ಇತರೆ ಸದಸ್ಯರು ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com